ವೀರಾಜಪೇಟೆ, ಮಾ. 22: ಜಿಲ್ಲಾ ಪಂಚಾಯಿತಿ, ವೀರಾಜಪೇಟೆ ತಾಲೂಕು ಪಂಚಾಯಿತಿ, ಪೊನ್ನಂಪೇಟೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ವೀರಾಜಪೇಟೆ ಪಶು ವೈದ್ಯ ಆಸ್ಪತ್ರೆ ಹಾಗೂ ಕೆನರಾ ಬ್ಯಾಂಕ್ ವೀರಾಜಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮೀಪದ ಕೆ. ಬೋಯಿಕೇರಿಯಲ್ಲಿ “ಮಿಶ್ರತಳಿ ಹಸುಗಳ ಹಾಗೂ ಕರುಗಳ ಪ್ರದರ್ಶನ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರ” ನಡೆಯಿತು.

ಕೆನರಾ ಬ್ಯಾಂಕ್ ವೀರಾಜಪೇಟೆ ಶಾಖೆಯ ಮುಖ್ಯ ವ್ಯವಸ್ಥಾಪಕ ರಾಮಚಂದ್ರ ಕೆ. ಸಬ್ನಿಸ್ ಶಿಬಿರವನ್ನು ಉದ್ಘಾಟಿಸಿದರು. ಮಡಿಕೇರಿಯ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ವೀರಾಜಪೇಟೆ ಶಾಖೆಯ ಕೃಷಿ ವಿಸ್ತರಣಾ ಅಧಿಕಾರಿ ವಿ.ಕೆ. ಮುಬಶ್ಶಿನಾ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ಡಾ. ಶಾಂತೇಶ್ ಮತ್ತು ಡಾ. ರಾಕೇಶ್ ಮತ್ತು ಸಿಬ್ಬಂದಿ ಕುಶಾಲ್ ಇವರುಗಳ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಜಾನುವಾರುಗಳಿಗೆ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಮತ್ತು ರೋಗ ನಿರೋಧಕ ಲಸಿಕೆ ನೀಡಲಾಯಿತು.

150ಕ್ಕೂ ಹೆಚ್ಚು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕೆ ಉಚಿತವಾಗಿ ನೀಡಲಾಯಿತು. ಜಾನುವಾರುಗಳಿಗೆ ಮತ್ತು ನಾಯಿಗಳಿಗೆ ಅಗತ್ಯ ಪೌಷ್ಟಿಕ ಆಹಾರಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. ಪಾಲ್ಗೊಂಡಿದ್ದ ಉತ್ತಮ ಮಿಶ್ರತಳಿ ಹಸುಗಳು ಮತ್ತು ಕರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.