ಗೋಣಿಕೊಪ್ಪಲು, ಮಾ. 21: ಗ್ರಾಮೀಣ ಭಾಗವಾದ ದಕ್ಷಿಣ ಕೊಡಗಿನ ಮಾಯಮುಡಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಟಿವಿ9 ಸಂಸ್ಥೆ ವತಿಯಿಂದ ರೂ. 15 ಲಕ್ಷ ವೆಚ್ಚದ ಬಸ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಸುದ್ದಿ ಮಾಧ್ಯಮವು ಕೇವಲ ಸುದ್ದಿಗೆ ಸೀಮಿತಗೊಳ್ಳದೆ ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ಕೆಲಸ ಮಾಡುತ್ತಿದ್ದೇವೆ ಎಂದು ಟಿವಿ 9ನ ಇನ್‍ಪುಟ್ ಚೀಫ್ ಜಗದೀಶ್ ಬೆಳ್ಯಪ್ಪ ಹೇಳಿದರು.

ಕೊಡಗಿನಲ್ಲಿ ಮಹಾಮಳೆಗೆ ತತ್ತರಿಸಿದ ಸಂದರ್ಭ ಟಿವಿ9 ಬಿತ್ತರಿಸಿದ ಕಾರ್ಯಕ್ರಮದಲ್ಲಿ ನಾಡಿನ ಜನತೆ ನಿರೀಕ್ಷೆಗೂ ಮೀರಿ ಸಹಾಯ ಹಸ್ತ ನೀಡಿದ್ದಾರೆ. ಈ ಹಣದಿಂದ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಒದಗಿಸಲಾಗಿದೆ. ಬಸ್‍ಅನ್ನು ಶಾಲಾ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಅತಿಥಿ ಟಿವಿ 9ನ ಆ್ಯಂಕರ್ ಹರಿಪ್ರಸಾದ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆನೆ ಹಾವಳಿಯಿಂದ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಲು ಕಷ್ಟ ಸಾಧ್ಯವಾಗುತ್ತಿದೆ. ಇದರಿಂದ ಕುಗ್ರಾಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚನೆ ಆಗಬಾರದು ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಕೊಡುಗೆಯಾಗಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಅಂತರರಾಷ್ಟ್ರೀಯ ಕರಾಟೆ ಪಟು ಅರುಣ್ ಮಾಚಯ್ಯ ಮಾತನಾಡಿ ಟಿವಿ 9 ನೀಡಿರುವ ಕೊಡುಗೆಯನ್ನು ಇಲ್ಲಿನ ಜನತೆ ಮರೆಯುವಂತಿಲ್ಲ.ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳ ಕಷ್ಟವನ್ನು ಅರಿತು ನೀಡಿರುವ ಬಸ್‍ನ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತೇವೆ ಎಂದರು. ಯುಕೋ ಸಂಘಟನೆಯ ಮಂಜು ಚಿಣ್ಣಪ್ಪ ಮಾತನಾಡಿ ಜಿಲ್ಲೆಯಲ್ಲಿ ನೆರೆ ಹಾವಳಿ ಸಂಭವಿಸಿ ದಾಗ ಜನತೆ ತತ್ತರಿಸಿ ಹೋಗಿದ್ದರು. ತಮ್ಮ ಮಕ್ಕಳ ಮುಂದಿನ ಭವಿಷ್ಯ ವೇನು.? ಎಂದು ಚಿಂತೆಗೀಡಾಗಿದ್ದರು. ಆ ಸಂದರ್ಭದಲ್ಲಿ ಟಿವಿ9 ತೋರಿಸಿದ ಕಾಳಜಿಯಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಸನಾಗಿದೆ ಎಂದರು.

ಶಾಲೆಯ ದೈಹಿಕ ಶಿಕ್ಷಕ ಸತ್ಯ ಮಾತನಾಡಿ ಗ್ರಾಮೀಣ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುತ್ತಿದ್ದೇವು ಈ ಸಂದರ್ಭ ಶಾಲೆಗೆ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳನ್ನು ಕರೆದು ಕೊಂಡು ಬರುವ ವ್ಯವಸ್ಥೆಯಾದಲ್ಲಿ ಅನುಕೂಲವಾಗಲಿದೆ ಎಂಬ ವಿಷಯ ತಿಳಿದು ಟಿವಿ 9 ಮಾದ್ಯಮದ ಕದ ತಟ್ಟಿದ ಸಂದರ್ಭ ನಮ್ಮ ಮನವಿಗೆ ಸ್ಪಂದನ ದೊರಕಿದೆ. ಇದಕ್ಕಾಗಿ ನಾವು ಚಿರಋಣಿಯಾಗಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಟಿವಿ9 ನ ಎಡ್ಮಿನ್ ಪ್ರಕಾಶ್, ಜಿ.ಪಂ. ಸದಸ್ಯರಾದ ಬಿ.ಎನ್. ಪ್ರಥ್ವಿ, ನಾಗರಿಕ ಮುಖಂಡರಾದ ಟಾಟು ಮೊಣ್ಣಪ್ಪ, ಟಿಪ್ಪು ಬಿದ್ದಪ್ಪ, ಬಿಇಒ ಶ್ರೀಶೈಲ ಬೆಳಗಿ, ಶಿಕ್ಷಕರ ಸಂಘದ ಅದ್ಯಕ್ಷ ಸುರೇಂದ್ರ, ಸಿ.ಆರ್.ಪಿ. ಜೀವನ್, ದೈಹಿಕ ಶಿಕ್ಷಕರಾದ ಸುಬ್ಬಯ್ಯ, ಬಿ.ಆರ್.ಪಿ ಪ್ರಸನ್ನಕುಮಾರ್, ಮುಂತಾದವರು ಹಾಜರಿದ್ದರು. ಶಾಲಾ ಶಿಕ್ಷಕಿ ಕೆ.ಎ. ನಸೀಮ ಕಾರ್ಯಕ್ರಮ ನಿರೂಪಿಸಿ ದರು, ಶಿಕ್ಷಕಿ ರಾಗಿಣಿ ಸ್ವಾಗತಿಸಿ, ಶಿಕ್ಷಕಿ ಸಹಾನ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯರು ಸೇರಿದಂತೆ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.-ಹೆಚ್.ಕೆ. ಜಗದೀಶ್