ಮಡಿಕೇರಿ, ಮಾ. 22: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರು ತಾ. 19 ರಂದು ಮುಸ್ಸಂಜೆಯಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರುವ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ಎಳೆಯುವಂತೆ ಕೋರಿ, ಮೃತರ ಚಿಕ್ಕಪ್ಪ ಹಾಗೂ ಬಿಜೆಪಿ ಪ್ರಮುಖ ರಾಜಾರಾಮ ಕಳಗಿ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ದೂರಿನಲ್ಲಿ ಆರೋಪಿಸಿರುವ ಪ್ರಕಾರ ತಾ. 19 ರಂದು ಬಾಲಚಂದ್ರ ಕಳಗಿ ಅವರು ತಮ್ಮ ಓಮ್ನಿ ಕಾರಿನಲ್ಲಿ ಮಡಿಕೇರಿಗೆ ಬಂದಿದ್ದು, ಸಂಪಾಜೆಯ ಪರಿಚಿತ ದಂಪತಿಯ ಮನೆಗೆಂದು ಅವರ ಜೊತೆಯಲ್ಲಿ ಹುಣಸೂರುವಿಗೆ ತೆರಳಿ ಪೀಠೋಪಕರಣ ಖರೀದಿಸಿಕೊಂಡು ಬರಲು ಮಾತನಾಡಿ ಕೊಂಡಿದ್ದರೆನ್ನಲಾಗಿದೆ. ಅನಂತರದಲ್ಲಿ ಈ ಕಾರ್ಯಕ್ರಮ ಬದಲಾಯಿಸಿ, ಆ ದಂಪತಿಯ ಕಾರಿನಲ್ಲೇ ಮೂರ್ನಾಡುವಿನ ಪೀಠೋಪಕರಣ ಮಳಿಗೆಯೊಂದಕ್ಕೆ ತೆರಳಿರುವರೆಂದು ಗೊತ್ತಾಗಿದೆ. ಈ ವೇಳೆ ಕಳಗಿ ಅವರ ಕಾರನ್ನು ಮಡಿಕೇರಿ ಬಳಿ ಒಂದೆಡೆ ನಿಲ್ಲಿಸಿದ್ದರೆನ್ನಲಾಗುತ್ತಿದೆ.ಅಲ್ಲದೆ, ಮೂರ್ನಾಡುವಿನ ಪೀಠೋಪಕರಣ ಮಳಿಗೆಯಲ್ಲಿ ಕಳಗಿ ಅವರು ತನ್ನ ಮೊಬೈಲ್‍ನಿಂದ, ಆ ದಂಪತಿಗೆ ಬೇಕಿದ್ದ ಪೀಠೋಪಕರಣ ಸಹಿತ ಛಾಯಾಚಿತ್ರ ತೆಗೆದದ್ದು ಬೆಳಕಿಗೆ ಬಂದಿದೆ.
ಇದು ಅವರ ಮೊಬೈಲ್‍ನಲ್ಲಿ 5.15ರ ಸುಮಾರಿಗೆ ದಾಖಲಾಗಿರುವದು ಖಾತರಿಯಾಗಿದೆ. ಆ ಬಳಿಕ ಸಂಜೆ 6.15ರ ವೇಳೆಗೆ ಮೇಕೇರಿ ಬಳಿಯ ತಾಳತ್‍ಮನೆ ಸಂಪರ್ಕ ರಸ್ತೆಯಲ್ಲಿ, ಗುಡ್ಡೆಹೊಸೂರು ಬಳಿಯ ಬೊಳ್ಳೂರು ಮೂಲದ ಹಾಲಿ ಮಡಿಕೇರಿ ನಿವಾಸಿ ಜಯ ಎಂಬವರ ಲಾರಿಯು (ಕೆ.ಎ. 12 ಎ. 6253) ಬಾಲಚಂದ್ರ ಕಳಗಿ ಅವರ ಕಾರಿಗೆ (ಕೆ.ಎ. 12 - ಎನ್. 4085) ಡಿಕ್ಕಿಯಾಗಿದೆ.
ಸಂಶಯಗಳಿಗೆ ಮೂಲ : ಈ ಅಪಘಾತ ಸಂಭವಿಸಿದ ಬೆನ್ನಲ್ಲೇ ಆರೋಪಿ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗುವ
(ಮೊದಲ ಪುಟದಿಂದ) ಮುನ್ನ, ಸಂಪಾಜೆಯ ದಂಪತಿ ಅಲ್ಲಿ ಈತನೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ಬಾಲಚಂದ್ರ ಕಳಗಿ ಅವರ ಮೊಬೈಲ್ ಅನ್ನು ತೆಗೆದುಕೊಂಡಿರುವ ಆರೋಪವಿದೆ. ಅಪಘಾತಕ್ಕೀಡಾಗಿದ್ದ ಕಳಗಿ ಅವರನ್ನು ಅದೇ ಮಾರ್ಗವಾಗಿ ಬೆಳಕುಮಾನಿ ಎಂಬಲ್ಲಿ ಕೆಲಸ ಮುಗಿಸಿ ಹೊದ್ದೂರು ಗ್ರಾಮಕ್ಕೆ ಹಿಂತಿರುಗುತ್ತಿದ್ದರೆನ್ನಲಾದ ಚೇತನ್ ಮತ್ತು ಇತರರು ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬದಲಾಗಿ ಈ ಪರಿಚಿತ ದಂಪತಿ ಕೆಲವೇ ಗಂಟೆ ಮುನ್ನ ಜತೆಯಲ್ಲಿದ್ದ ಬಾಲಚಂದ್ರ ಕಳಗಿ ಅವರ ಕಾರು ಅಪಘಾತಕ್ಕೀಡಾಗಿದ್ದ ಸಂದರ್ಭ, ಅವರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯದೆ ಮೊಬೈಲ್‍ನೊಂದಿಗೆ ತೆರಳಿರುವದು ಇನ್ನಷ್ಟು ಅನುಮಾನ ಹುಟ್ಟು ಹಾಕಿದೆ. ಅಲ್ಲದೆ ದಿನ ಬಿಟ್ಟು ಈ ಮೊಬೈಲ್ ಅನ್ನು ಕಳಗಿ ಅವರ ಸಂಬಂಧಿಯೊಬ್ಬರಿಗೆ ಈ ದಂಪತಿ ಹಸ್ತಾಂತರಿಸಿದ್ದು, ಬಾಲಚಂದ್ರ ಅವರ ಮನೆಯವರಿಗೆ ಅಥವಾ ಪೊಲೀಸ್ ವಶಕ್ಕೆ ನೀಡದಿರುವದು ಇದೀಗ ಹೊಸ ವಿವಾದ ಸೃಷ್ಟಿಸಿದೆ.
ಲಾರಿ ನಿಲ್ದಾಣದಿಂದ ಸುಳಿವು : ತಾ. 19 ರಂದು ಸಂಜೆಯ ನಡುವೆ, ಬಾಲಚಂದ್ರ ಕಳಗಿ ಅವರ ಕಾರಿಗೆ ಡಿಕ್ಕಿಯಾಗಿರುವ ಲಾರಿಯ ಚಾಲಕ ಇಲ್ಲಿಂದ ತೆರಳಿರುವದು ದೃಢಪಟ್ಟಿದೆ. ಈತ ಮದೆನಾಡು ಬಳಿಯ ಒಂದಿಷ್ಟು ದೂರ ತೆರಳಿ, ಲಾರಿಯನ್ನು ಒಂದೆಡೆ ತೊಳೆಯುತ್ತಿದ್ದುದನ್ನು ಕೆಲವರು ಗಮನಿಸಿದ್ದಾರೆ. ಅಲ್ಲಿಂದ ಲಾರಿ ವಾಪಾಸಾಗುವದರೊಂದಿಗೆ ಅವಘಡ ಸಂಭವಿಸಿದ್ದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ಸಂಬಂಧಿಕರಿಗೆ ಮೊಬೈಲ್ ನೀಡಿರುವ ದಂಪತಿಗೂ, ಈ ಲಾರಿ ಚಾಲಕನಿಗೂ ಇರುವ ಸಂಬಂಧ ಕುರಿತು ಸಂಶಯ ಹುಟ್ಟಿಕೊಂಡಿದೆ.
ನಾಲ್ಕು ನಿಟ್ಟಿನಲ್ಲಿ ತನಿಖೆ : ಈಗಾಗಲೇ ಬಾಲಚಂದ್ರ ಕಳಗಿ ಸಾವಿನ ಬಗ್ಗೆ ಹಲವು ರೀತಿಯ ಸಂಶಯ ವ್ಯಕ್ತಪಡಿಸಿ ಜಿಲ್ಲಾ ಬಿಜೆಪಿ ತನಿಖೆಗೆ ಆಗ್ರಹಿಸುವದರೊಂದಿಗೆ, ಮೃತರ ಚಿಕ್ಕಪ್ಪ ನೀಡಿರುವ ದೂರಿನ ಬೆನ್ನಲ್ಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಮೂಲಕ ನಾಲ್ಕು ನಿಟ್ಟಿನಲ್ಲಿ ವಿಚಾರಣೆಯೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಎಸ್‍ಪಿ ಪ್ರತಿಕ್ರಿಯೆ: ಈ ಸಂಬಂಧ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಸಿದ್ದಯ್ಯ ಹಾಗೂ ಠಾಣಾಧಿಕಾರಿ ಚೇತನ್ ಮಾಹಿತಿ ಸಂಗ್ರಹಿಸುತ್ತಿದ್ದು, ಆ ಬಳಿಕವಷ್ಟೇ ಸತ್ಯಾಂಶ ತಿಳಿಯಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪ್ರತಿಕ್ರಿಯೆ ನೀಡಿದ್ದಾರೆ. ಮೇಲ್ನೋಟಕ್ಕೆ ಇದುವರೆಗೆ ಯಾವದೇ ಸುಳಿವು ಲಭಿಸಿಲ್ಲವೆಂದು ಅವರು ತಿಳಿಸಿದ್ದಾರೆ.