ಸೋಮವಾರಪೇಟೆ, ಮಾ.22: ಜೀವ ಜಲದ ಮಿತ ಬಳಕೆ ಎಲ್ಲರ ಕರ್ತವ್ಯವಾಗಿದ್ದು, ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸಮೀಪದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ಪ್ರಾಕೃತಿಕ ಸಂಪತ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಕುಡಿಯುವ ನೀರಿಗೂ ಸಹ ಅಲ್ಲಲ್ಲಿ ಸಂಕಷ್ಟ ಎದುರಾಗುತ್ತಿರುವದನ್ನು ಕಾಣುತ್ತಿದ್ದೇವೆ. ಸಾರ್ವಜನಿಕರು ಬೇಕಾಬಿಟ್ಟಿ ನೀರನ್ನು ಬಳಸುವದನ್ನು ಬಿಟ್ಟು ನೀರಿನ ಮಿತವ್ಯಯದತ್ತ ಗಮನ ಹರಿಸಬೇಕು. ಸಕಲ ಜೀವ ರಾಶಿಗಳಿಗೂ ಅತೀ ಅಗತ್ಯವಾಗಿ ಬೇಕಿರುವ ಜಲಮೂಲ ಗಳನ್ನು ರಕ್ಷಿಸುವಂತಾಗಬೇಕು ಎಂದು ನ್ಯಾಯಾಧೀಶರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಎಸ್. ಭರತ್, ಕಾಲೇಜು ಪ್ರಾಂಶುಪಾಲ ಶ್ರೀಧರ್ ಅವರುಗಳು ಉಪಸ್ಥಿತರಿ ದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರುಗಳಾದ ಹೆಚ್.ಎಸ್. ವೆಂಕಟೇಶ್, ರಶ್ಮಿ ಅವರುಗಳು ದಿನದ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.