ಮಡಿಕೇರಿ, ಮಾ.22 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವಂತಾಗಬೇಕು. ಆ ನಿಟ್ಟಿನಲ್ಲಿ ಚುನಾವಣಾ ವೆಚ್ಚದ ಬಗ್ಗೆ ಹದ್ದಿನ ಕಣ್ಣಿಡಬೇಕು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ (ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ) ಸಂದೀಪ್ ಕುಮಾರ್ ಮಿಶ್ರ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ತಂಡೋಪಾದಿಯಾಗಿ ಕಾರ್ಯನಿರ್ವಹಿಸಬೇಕು. ಚುನಾವಣಾ ಆಯೋಗದ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸಬೇಕು. ಚೆಕ್ಪೋಸ್ಟ್ಗಳಲ್ಲಿ ಸರಿಯಾಗಿ ತಪಾಸಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವಿಲೆನ್ಸ್ ತಂಡ ಸೇರಿದಂತೆ ಎಲ್ಲಾ ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಬ್ಯಾಂಕ್ಗಳು ಆರ್ಬಿಐ ನಿಯಮಗಳನ್ನು ಪಾಲಿಸುವದರ ಜೊತೆಗೆ ಚುನಾವಣಾ ಆಯೋಗದ ನಿರ್ದೇಶನ ಅನುಸರಿಸಬೇಕು. ಎರಡು ಮೂರು ತಿಂಗಳಲ್ಲಿ ಖಾತೆಗಳಲ್ಲಿ ಹಣ ವರ್ಗಾವಣೆ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ದಾಖಲೆ ಇಲ್ಲದೆ ಸರಕು ಸಾಗಾಣೆ ಮಾಡುವ ವಾಹನಗಳ ತಪಾಸಣೆ ನಡೆಸಿ ಅನುಮಾನ ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವ್ಯಾಪಾರಿಗಳಿಗೆ ಯಾವದೇ ತೊಂದರೆಯಾಗದಂತೆ ಚುನಾವಣೆ ನೀತಿ ಸಂಹಿತೆ ಸಂಬಂಧಿಸಿದ ಅಗತ್ಯ ಮಾಹಿತಿ ನೀಡುವಂತೆ ಅವರು ತಿಳಿಸಿದರು.
ಪಾನ್ ಕಾರ್ಡ್ ಜೋಡಣೆಯಾಗದೆ ಇರುವ ಖಾತೆಗಳ ವಹಿವಾಟಿನ ಮೇಲೆ ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಕಳೆದ ಎರಡು ತಿಂಗಳಿಂದ ಇಂತಹ ಖಾತೆಗಳಲ್ಲಿ ನಡೆದ ಹಣದ ವಹಿವಾಟಿನ ಕುರಿತು ಅನುಮಾನ ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಕಾಫಿ ಬೀಜ ಮಾರಾಟ ನಡೆಯುತ್ತಿದ್ದು, ಕಾಫಿ ತೋಟದ ಮಾಲೀಕರು ಹಣದ ವ್ಯವಹಾರವನ್ನು ನಗದು ರೂಪದಲ್ಲಿ ಮಾಡದೆ ಬ್ಯಾಂಕ್ ಚೆಕ್ಗಳ ಮುಖಾಂತರ ತಮ್ಮ ವಹಿವಾಟು ನಿರ್ವಹಣೆ ಮಾಡಬೇಕು. ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುವ ಕೂಲಿಗಾರರಿಗೆ ವೇತನವನ್ನು ನಗದು ರೂಪದಲ್ಲಿ ನೀಡಲು ಯಾವದೇ ಅಭ್ಯಂತರವಿರುವದಿಲ್ಲ. ಬದಲಿಗೆ ಕಾಫಿ ಖರೀದಿ ಮತ್ತು ಮಾರಾಟದ ಹೆಚ್ಚು ಮೊತ್ತದ ವಹಿವಾಟನ್ನು ಚೆಕ್ ಮುಖಾಂತರ ನಿರ್ವಹಣೆ ಮಾಡಲು ಕಾಫಿ ಬೆಳೆಗಾರರಿಗೆ ಮಾಹಿತಿ ನೀಡುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವಿವಿಧ ತಂಡಗಳ ನೇಮಕ, ನೋಡಲ್ ಅಧಿಕಾರಿಗಳ ನಿಯೋಜನೆ, ಚೆಕ್ಪೋಸ್ಟ್ಗಳ ಸ್ಥಾಪನೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಅವರು ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಸುಮಾರು 257 ಕಡೆ ದಾಳಿ ನಡೆಸಿ 162 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 17 ಗಂಭೀರ ಪ್ರಕರಣಗಳೆಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದುವರೆಗೆ ಸುಮಾರು 2,769 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 20 ಲಕ್ಷ ರೂ. ಆಗಿದೆ ಎಂದು ಅವರು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾಜಿ ಅವರು ಬ್ಯಾಂಕ್ಗಳಲ್ಲಿ ಹಣ ಚಲಾವಣೆ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಲಾಗಿದೆ. ಈ ಸಂಬಂಧ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ಸಹಾಯಕ ಚುನಾವಣಾಧಿಕಾರಿಗಳಾದ ಟಿ. ಜವರೇಗೌಡ, ಶ್ರೀನಿವಾಸ್, ನೋಡಲ್ ಅಧಿಕಾರಿ ರಾಜು ಇತರರು ಇದ್ದರು.