ಸಿದ್ದಾಪುರ, ಮಾ. 22: ವಸತಿ ಯೋಜನೆಯಡಿಯಲ್ಲಿ ಹಣ ಬರಬಹುದೆಂದು ಮನೆ ಕೆಡವಿ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಪ್ರಸಂಗ ಎದುರಾಗಿದೆ. ಸರ್ಕಾರದ ವತಿಯಿಂದ ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನುಭಿಗಳಾಗಿರುವ ಸರ್ಕಾರದಿಂದ ಬರಬೇಕಾದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಹ ಪರಿಸ್ಥಿತಿಯಾಗಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್‍ನಗರ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿಗೆ ಕಳೆದ 8 ತಿಂಗಳಿನಿಂದ ಹಣ ಮಂಜುರಾತಿ ಆಗಲಿಲ್ಲ. ಹಲವು ಮಂದಿ ಬಡವರು ವಸತಿ ಯೋಜನೆಯಡಿಯಲ್ಲಿ ಸರ್ಕಾರದ ಹಣ ಬರುವ ನಿರೀಕ್ಷೆಯಲ್ಲಿ ತಮ್ಮ ಹಳೆಯ ಮನೆಗಳನ್ನು ಕೆಡವಿ ಹಾಕಿದ್ದಾರೆ. ಅಲ್ಲದೇ ಬೇರೆಯರಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದು ಅಡಿಪಾಯ ಹಾಕಿ ಅರ್ಧ ಭಾಗದಷ್ಟು ಗೋಡೆಗಳನ್ನು ಏರಿಸಿದ್ದಾರೆ. ಆದರೆ ಕಳೆದ 8 ತಿಂಗಳಿನಿಂದ ಫಲಾನುಭವಿ ಗಳಿಗೆ ಸರ್ಕಾರದಿಂದ ಪಂಚಾಯಿತಿ ಮೂಲಕ ಬರುವ ಹಣ ಮಂಜು ರಾಗದೇ ತಲೆ ಮೇಲೆ ಕೈ ಇಟ್ಟು ಚಿಂತಾಗ್ರಸ್ಥರಾಗಿದ್ದಾರೆ. ಸರಕಾರದಿಂದ ತಮ್ಮ ಖಾತೆಗಳಿಗೆ ಇಂದಲ್ಲ ನಾಳೆ ಹಣ ಬರಬಹುದೆಂದು ವಿಶ್ವಾಸದಿಂದ ದಿನ ಕಳೆಯುತ್ತಿದ್ದಾರೆ.
ಇತ್ತ ಇರುವ ಮನೆಯನ್ನು ಕೆಡವಿ ಹೊಸ ಮನೆಯ ಆಸೆಯಲ್ಲಿದ್ದ ಫಲಾನುಭವಿಗಳ ಕನಸು ನನಸಾಗುತ್ತಿಲ್ಲ. ಕೆಲವರಿಗೆ ವಾಸಿಸಲು ಸಮರ್ಪಕವಾದ ಮನೆ ಇಲ್ಲದೆ ಪ್ಲಾಸ್ಟಿಕ್ ಹೊದಿಕೆ ಕಟ್ಟಿಕೊಂಡು ಸಂಸಾರದೊಂದಿಗೆ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ. ಮುಂದಿನ 2 ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುವದರಿಂದ ಮನೆಯನ್ನು ಕೆಡವಿದ ಮಂದಿಗೆ ಮಳೆಗಾಲದಲ್ಲಿ ಯಾವ ರೀತಿ ಜೀವನ ಸಾಗಿಸುವದೆಂದು ಚಿಂತಿಸುತ್ತಿದ್ದಾರೆ. ದಿನ ನಿತ್ಯ ಪಂಚಾಯಿತಿ ಕಚೇರಿಗೆ ಅಲೆದಾಡುವ ಫಲಾನುಭವಿಗಳು ಮುಂದೆ ಏನು ಮಾಡುವದೆಂದು ದುಃಖಿಸುತ್ತಿದ್ದಾರೆ.
ಸರಕಾರದ ಹಣವನ್ನು ನಂಬಿ ಸಾಕಷ್ಟು ಮಂದಿ ಕಡುಬಡವರು ಹೊಸ ಮನೆಯ ಕನಸು ಕಂಡು ಇದೀಗ ಹಳೆ ಮನೆಯೂ ಇಲ್ಲ, ಹೊಸ ಮನೆ ಕಟ್ಟಲು ಸಾದ್ಯವಿಲ್ಲದೇ ಆಕಾಶದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಅಕಾಲಿಕ ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ ಹಣ ಮಂಜುರಾತಿಯಾಗದ ಫಲಾನುಭವಿಗಳಿಗೆ ಹಣ ಮಂಜುರಾತಿ ಮಾಡಿಕೊಡಲಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-ಚಿತ್ರ, ವರದಿ: ವಾಸು