ಮಡಿಕೇರಿ, ಮಾ. 20: ಹೊದ್ದೂರು ಕಣ್ಣ ಬಲಮುರಿ ಗ್ರಾಮದ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ತಾ. 25, 26 ಮತ್ತು 27 ರಂದು ಆಚರಿಸಲಾಗುವದು. ತಾ. 25 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಪರಾಹ್ನ 3 ಗಂಟೆಗೆ ದೇವಾಲಯದಿಂದ ಮೂರ್ನಾಡಿನವರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ದೇವಿಯ ಮೆರವಣಿಗೆ ಜರುಗಲಿದೆ. ತಾ. 26 ರಂದು ಅಪರಾಹ್ನ 3 ಗಂಟೆಗೆ ವಾಟೆಕಾಡುವಿನಿಂದ ಹೊರಟು ಬಲಮುರಿಯ ದೇವಾಲಯದವರೆಗೆ ವಾದ್ಯಗೋಷ್ಠಿ ಹಾಗೂ ಕೇರಳದ ಚಂಡೆ ವಾದ್ಯದೊಂದಿಗೆ ಪ್ರತಿ ಮನೆಯಿಂದ ಶ್ರೀ ದೇವಿಗೆ ಹಣ್ಣುಕಾಯಿ ಪೂಜೆ ಅರ್ಪಿಸಲಾಗುವದು. ಸಂಜೆ 5 ಗಂಟೆಗೆ ಪವಿತ್ರ ಕಾವೇರಿ ನದಿಯಲ್ಲಿ ಗಂಗಾಸ್ನಾನ, ನಂತರ ದೇವಿಯ ಮೆರವಣಿಗೆಯೊಂದಿಗೆ ದೇವಾಲಯ ಪ್ರದಕ್ಷಿಣೆ, ರಾತ್ರಿ 9.30 ಗಂಟೆಯಿಂದ ದೇವಿಗೆ ಅಲಂಕಾರದೊಂದಿಗೆ ಮಹಾಪೂಜೆ, ಮಂಗಳಾರತಿ, ಪೂವಿನ ವರ ಬೇಡುವಿಕೆ, ರಾತ್ರಿ 10.30 ಗಂಟೆಯಿಂದ ವಾದ್ಯಗೋಷ್ಠಿ, ಚಂಡೆ ವಾದ್ಯಮೇಳ ಹಾಗೂ ಸಿಡಿಮದ್ದಿನೊಂದಿಗೆ ಪ್ರತಿ ಮನೆಯಿಂದ ದೇವಿಗೆ ಆರತಿ ಒಪ್ಪಿಸುವದು. ತಾ. 27 ರಂದು ಬೆಳಿಗ್ಗೆ 10 ಗಂಟೆಯಿಂದ 1.30 ರವರೆಗೆ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸುವದು. ತಾ. 26 ಮತ್ತು 27 ರಂದು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.