ಕುಶಾಲನಗರ, ಮಾ. 20 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳ ನಡುವೆ ಪ್ರಬುದ್ಧ ಮತದಾರನ ಜವಾಬ್ದಾರಿ ಅತಿ ಪ್ರಮುಖದ್ದಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಪ್ರಬುದ್ಧರ ಗೋಷ್ಠಿ' ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಒಳಿತು, ಕೆಡುಕು ಮತದಾರರ ಕೈಯಲ್ಲಿದೆ. ಚುನಾವಣಾ ಸಂದರ್ಭಗಳಲ್ಲಿ ಮತ ಬೇಡಿ ಜಯಗಳಿಸುವ ರಾಜಕಾರಣಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಕಾರ್ಯಯೋಜನೆಗಳು, ಪ್ರಗತಿಯ ಬಗ್ಗೆ ಮತದಾರನಿಗೆ ಮಾಹಿತಿ ಒದಗಿಸುವ ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು. ಕಳೆದ ಬಾರಿಯ ಲೋಕಸಭಾ ಚುನಾವಣಾ ಸಂದರ್ಭ ಮೋದಿಯ ಪರ ಮತ ಬೇಡಿದ ಬಿಜೆಪಿ ಕಾರ್ಯಕರ್ತರು, ಚುನಾಯಿತ ಜನಪ್ರತಿನಿಧಿಗಳು ಇದೀಗ ಮತದಾರರ ಪ್ರಶ್ನೆಗೆ ಉತ್ತರ ನೀಡುವಂತಹ ಸಂದರ್ಭ ಒದಗಿದೆ.

ಇಂತಹ ಗುಣಾತ್ಮಕ ನಡೆಗಳ ಮೂಲಕ ಭಾರತದ ವರ್ಚಸ್ಸನ್ನು ಹೆಚ್ಚಿಸಿ ಇತರೆ ದೇಶಗಳ ನಡುವೆ ಪ್ರಧಾನಿ ಮೋದಿ ಭಾರತವನ್ನು ಅತ್ಯಂತ ಶಕ್ತಿಶಾಲಿಯಾಗಿ ರೂಪಿಸಿದ್ದಾರೆ ಎಂದರು.

ಕಳೆದ 5 ವರ್ಷಗಳಲ್ಲಿ ಇಂತಹ ಅನೇಕ ಸವಾಲು, ಸಮಸ್ಯೆ, ಆತಂಕಗಳ ನಡುವೆಯೂ ಕೂಡ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ, ಮೇಲ್ಮಟ್ಟದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಮೂಲಕ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ಮೂಡಿಸುವದರೊಂದಿಗೆ ಕೇಂದ್ರ ಸರಕಾರ ದೇಶದ ಕೀರ್ತಿಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಪ್ರಾಸ್ತಾವಿಕ ನುಡಿಗಳಾಡಿ, ದೇಶದ ಹಿತ ಕಾಯುವ ಸರಕಾರ ರಚನೆಯಲ್ಲಿ ಪ್ರಬುದ್ಧ ಮತದಾರರು ಕೈಜೋಡಿಸುವಂತಾಗ ಬೇಕು. ಪ್ರತಿನಿತ್ಯ ದೇಶಾಭಿವೃದ್ಧಿಯ ಬಗ್ಗೆ ಚಿಂತನೆ ಹರಿಸಿ ಆಂತರಿಕ ಶತ್ರುಗಳ ಸದೆಬಡಿಯುವ ಮೂಲಕ ದೇಶ ಕಟ್ಟುವ ಯುವ ಪಡೆ ರಚನೆಯ ಅಗತ್ಯವಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡಿದ್ದವರು ಮೋದಿ ಸರಕಾರದ ಸಾಧನೆ, ಜನಪ್ರತಿನಿಧಿಗಳ ಲೋಪಗಳು, ಜನಸಾಮಾನ್ಯರ ಇಂಗಿತ, ಬೇಡಿಕೆಗಳ ಬಗ್ಗೆ ಗಮನ ಸೆಳೆದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಮಾಜಿ ಸೈನಿಕ ಸುಧೀರ್, ನಗರ ಬಿಜೆಪಿ ಘಟಕ ಅಧ್ಯಕ್ಷ ಕೆ.ಜಿ.ಮನು, ಉಪಾಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಎಚ್.ಡಿ.ಶಿವಾಜಿ, ಹಿಂದುಳಿದ ವರ್ಗಗಳ ಪ್ರಮುಖ ಕೆ.ಎನ್.ದೇವರಾಜ್, ಯುವ ಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮತ್ತಿತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.