ಸೋಮವಾರಪೇಟೆ, ಮಾ. 20: ಸಾಧಕರ ಆದರ್ಶಗಳೇ ಸಾಧನೆಗೆ ಮೆಟ್ಟಿಲಾಗಿದ್ದು, ಸಾಧಕ ಮಹಿಳೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಹಿಳೆಯರು ಸಾಧನೆಯ ಮೆಟ್ಟಿಲೇರಬೇಕೆಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್ ಅಭಿಪ್ರಾಯಿಸಿದರು.
ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಶಿವಶರಣೆಯರ ಕೂಡುಗೆ ಅಪಾರವಾದುದು. ಧೀರ ಮಹಿಳೆಯರಾದ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಮದರ್ ಥೆರೆಸಾ ಮುಂತಾದ ಮಹಾನ್ ನಾಯಕಿಯರ ಆದರ್ಶ ಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇಂದಿಗೂ ಹೆಣ್ಣು ಸಾಮಾಜಿಕ ಸಂಕೋಲೆಯಲ್ಲಿದ್ದಾಳೆ. ಮನೆಯಲ್ಲೂ ಹೆಣು ಮಕ್ಕಳು, ಗಂಡು ಮಕ್ಕಳು ಎಂಬ ಭೇದಭಾವವಿದೆ. ಅವಳಿಗೆ ಸೂಕ್ತ ಪ್ರೋತ್ಸಾಹ ಸಿಕ್ಕರೆ, ಇನ್ನು ಹೆಚ್ಚಿನ ಸಾಧನೆಗಳನ್ನು ಮಾಡುತ್ತಾಳೆ. ಮಹಿಳೆ ಕಲ್ಪನಾ ಲೋಕದಲ್ಲಿ ಬದುಕಬಾರದು, ಆತ್ಮವಿಶ್ವಾಸದಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಜಲ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾ ರಂಭದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉಪಾಧ್ಯಕ್ಷೆ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಸಂಗೀತಾ ದಿನೇಶ್, ಖಜಾಂಚಿ ಲಾವಣ್ಯ ಮೋಹನ್, ಶಾಲೆಯ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.