ಗೋಣಿಕೊಪ್ಪಲು,ಮಾ. 18 : ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ದಿಡ್ಡಳ್ಳಿ ನಿರಾಶ್ರಿತರ ಹೋರಾಟ, ಇದೀಗ ತಣ್ಣಗಾಗಿದೆ. ಜೂನ್ 20,2016 ರಿಂದ ಆರಂಭಗೊಂಡ ದಿಡ್ಡಳ್ಳಿ ನಿರಾಶ್ರಿತರ ಹೋರಾಟ 9 ತಿಂಗಳು ಮುಂದುವರಿಂಯಿತು. ದಿಡ್ಡಳ್ಳಿ ಅಕ್ರಮ ವಸತಿ ಪ್ರದೇಶವನ್ನು ಪೆÇಲೀಸ್-ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ತೆರವು ಮಾಡಿದ ನಂತರ ದಿಡ್ಡಳ್ಳಿ ರಸ್ತೆ ಬದಿಯಲ್ಲಿಯೇ ‘ಟೆಂಟ್’ ನಿರ್ಮಾಣವಾಗಿ 3 ತಿಂಗಳು ಮತ್ತೆ ಹೋರಾಟ, ಬೆತ್ತಲೆ ಓಟ ನಡೆದಿರುವದು ಈಗ ಇತಿಹಾಸ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ‘ದಿಡ್ಡಳ್ಳಿ’ ಮೀಸಲು ಅರಣ್ಯದಲ್ಲಿ ರಾತ್ರೋರಾತ್ರಿ ಜಿಲ್ಲೆಯ ವಿವಿಧೆಡೆಯಿಂದ ಬಂದು ಮನೆಕಟ್ಟಿ ಕುಳಿತವರಲ್ಲಿ ಸುಮಾರು 526 ಜೇನುಕುರುಬ ಮತ್ತು ಯರವ ಕುಟುಂಬಗಳಿಗೆ ಕುಶಾಲನಗರ ಸಮೀಪ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮದಲ್ಲಿ ಪುನರ್ವಸತಿ ಕಾರ್ಯ ನಡೆಯುತ್ತಿದೆ. ಸುಮಾರು ಒಂದು ವರ್ಷ ನಡೆದ ಪ್ರತಿಭಟನೆ ‘ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶ’ಕ್ಕೆ ರಾಜ್ಯ, ರಾಷ್ಟ್ರಮಟ್ಟದ ನಾಯಕರುಗಳ ತಂಡವೇ ಭೇಟಿ ನೀಡಿತ್ತು. ದಿನನಿತ್ಯವೂ ಸಂಘರ್ಷ, ನೂರಾರು ವಾಹನಗಳ ಓಡಾಟ ಇತ್ಯಾದಿಗಳಿಂದ ಗೊಜಲುಗಳ ತಾಣವಾಗಿ ದಿಡ್ಡಳ್ಳಿ ಮಾರ್ಪಾಡಾಗಿತ್ತು. ಚೆನ್ನಯ್ಯನಕೋಟೆ-ಮಾಲ್ದಾರೆ ಸರಹದ್ದಿನಲ್ಲಿ ತಿತಿಮತಿ- ದೇವಮಚ್ಚಿ ಮೀಸಲು ಅರಣ್ಯ ಪ್ರದೇಶ ಹಾಗೂ ಮಾಲ್ದಾರೆ-ದುಬಾರೆ ಮೀಸಲು ಅರಣ್ಯ ಪ್ರದೇಶಗಳು ಒಳಪಟ್ಟಿದ್ದು ಇದೀಗ ಫೆ.13 ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಅರಣ್ಯ ಹಕ್ಕುಪತ್ರ ಇಲ್ಲದವರನ್ನು ಒಕ್ಕಲೆಬ್ಬಿಸುವಂತೆ ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಬುಡಕಟ್ಟು ಜನಾಂಗಕ್ಕೆ ಸೇರದ ಇತರೆ ಪಾರಂಪರಿಕ ಅರಣ್ಯವಾಸಿಗಳು 2005ಕ್ಕೂ ಮುನ್ನ ಸುಮಾರು 75 ವರ್ಷ ವಾಸವಿದ್ದ ಬಗ್ಗೆ ದೃಢೀಕರಣ ನೀಡಬೇಕಾಗಿದ್ದು ಇದೀಗ ದೇವಮಚ್ಚಿ ಮತ್ತು ಚೆನ್ನಂಗಿಯ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಇತರೆ ಜನಾಂಗದ ನಿದ್ದೆ ಕೆಡಿಸಿದೆ.

ಮತ್ತೊಂದು ದಿಡ್ಡಳ್ಳಿ ಹೋರಾಟ ಇನ್ನು ಮುಂದೆ ಅಸಾಧ್ಯ. ಯಾಕೆಂದರೆ ದಿಡ್ಡಳ್ಳಿ ಹೋರಾಟದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟ ಸುಮಾರು 30 ಬುಡಕಟ್ಟು ಕುಟುಂಬಗಳು ಮಾತ್ರ ಫಲಾನುಭವಿಗಳಾಗಿ ಆಯ್ಕೆಯಾಗಿದ್ದು, 526 ಕುಟುಂಬಗಳಲ್ಲಿ ಉಳಿದವರೆಲ್ಲರೂ ಜಿಲ್ಲೆಯ ಬೇರೆ ಬೇರೆ ಭಾಗದಿಂದ ದಿಡ್ಡಳ್ಳಿಗೆ ಬಂದು ಕುಟೀರ ಕಟ್ಟಿಕೊಂಡು ಪ್ರತಿಭಟನೆ ನಡೆಸಿದವರಾಗಿದ್ದರು.

ಇದೀಗ ಅಭಯಾರಣ್ಯದಲ್ಲಿಯೇ ವಾಸವಿದ್ದು ಅರಣ್ಯ ಹಕ್ಕುಪತ್ರ ತಿರಸ್ಕೃತಗೊಂಡ ವರನ್ನೂ ತೆರವು ಮಾಡಬೇಕಾದ ಅನಿವಾರ್ಯತೆ ಅರಣ್ಯ ಇಲಾಖೆಗೆ ಒದಗಿಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಾಫಿತೋಟದ ಲೈನ್‍ಮನೆಗಳಲ್ಲಿ ವಾಸವಿದ್ದು ನಂತರ ಕಾಡಿಗೆ ಬಂದು ಟೆಂಟ್ ಹಾಕಿಕೊಂಡು ಹೋರಾಟ ಮಾಡಲು ಇನ್ನು ಅವಕಾಶ ಕಡಿಮೆ.ದಿಡ್ಡಳ್ಳಿ ಹೋರಾಟ ಜಿಲ್ಲಾಡಳಿತ ಹಾಗೂ ರಾಜ್ಯಸರ್ಕಾರದ ಮರ್ಯಾದೆ ಪ್ರಶ್ನೆಯಾಗಿ ಕಾಡಿದ್ದು, ಇತರೆ ಲೈನ್ ಮನೆಯಲ್ಲಿದ್ದವರೂ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಸೌಲಭ್ಯ ಪಡೆದುಕೊಂಡಿದ್ದರು. ಇನ್ನು ಮುಂದೆ ಇಂತಹಾ ಹೋರಾಟ ಕಷ್ಟಸಾಧ್ಯ. ಯಾಕೆಂದರೆ ಇದೀಗ ಅರಣ್ಯದಲ್ಲಿ ಇರುವ ಅರಣ್ಯ ಹಕ್ಕುಪತ್ರವಿಲ್ಲದ ಎಲ್ಲರನ್ನೂ ಮುಂದಿನ ಜುಲೈ 24ಕ್ಕೂ ಮುನ್ನ ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿರುವ ಹಿನ್ನೆಲೆ ಮುಂದೆ ಮತ್ತಷ್ಟು ಸಂಘರ್ಷವನ್ನು ಆಯಾಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಎದುರಿಸಬೇಕಾಗಬಹುದು.

ಇದು ಕೇವಲ ಚೆನ್ನಯ್ಯನಕೋಟೆ ಗ್ರಾ.ಪಂ.ಯ ಸಮಸ್ಯೆಯಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಒಳಗೊಂಡಂತೆ ಜಿಲ್ಲೆಯ ವನ್ಯಜೀವಿ ವಲಯ, ಮೀಸಲು ಅರಣ್ಯ, ಸಂರಕ್ಷಿತ ಅರಣ್ಯದಲ್ಲಿ ವಾಸವಿರುವ ಬುಡಕಟ್ಟು ಜನಾಂಗ ಹಾಗೂ ಇತರರು, ಅರಣ್ಯ ಹಕ್ಕು ಪತ್ರ ಹೊಂದಿಲ್ಲದವರು, ತಿರಸ್ಕೃತಗೊಂಡವರು, 75 ವರ್ಷ ವಾಸ ದೃಢೀಕರಣ ನೀಡಲು ಸಾಧ್ಯವಾಗದವರು ಇನ್ನು ಮುಂದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

(ಮೊದಲ ಪುಟದಿಂದ) ರೆವೆನ್ಯೂ ಗ್ರಾಮ ಚೆನ್ನಯ್ಯನ ಕೋಟೆಯ ಚೆನ್ನಂಗಿ ವ್ಯಾಪ್ತಿಯಲ್ಲಿ ದಿಡ್ಡಳ್ಳಿ, ಗುಡ್ಲೂರು,ಚೊಟ್ಟೆಪಾರೆ, ಚಿಕ್ಕರೇಷ್ಮೆ, ಕೆಸುವಿನ ಕೆರೆ, ದೆಯ್ಯದ ಹಡ್ಲು, ಕೋಟೆಮಚ್ಚಿ, ಬಸವನಹಳ್ಳಿ, ಮೂಡಬೈಲು ಇತ್ಯಾದಿ ಒಳಗೊಂಡಿದ್ದು ಇವುಗಳಲ್ಲಿ ಮೀಸಲು, ವನ್ಯಜೀವಿ ವಲಯ ಅರಣ್ಯವ್ಯಾಪ್ತಿಗೆ ಒಳಪಟ್ಟ ಹಾಡಿಗಳು, ಗ್ರಾಮಗಳಿಗೆ ಸುಪ್ರೀಂ ಆದೇಶ ಅನ್ವಯವಾಗಲಿದೆ.

ತಿತಿಮತಿ ಮೀಸಲು ಅರಣ್ಯ ವ್ಯಾಪ್ತಿಯನ್ನು ದೇವಮಚ್ಚಿ ಹಾಗೂ ಮಾವುಕಲ್ ವಲಯವೆಂದು ವಿಂಗಡಿಸಲಾಗಿದೆ. ಚೆನ್ನಯ್ಯನ ಕೋಟೆ, ಚೆನ್ನಂಗಿ ವ್ಯಾಪ್ತಿಯ ಅರಣ್ಯ ತಿತಿಮತಿ ಅರಣ್ಯ ವಲಯಕ್ಕೆ ಸೇರಲಿದ್ದು ಸುಮಾರು 80 ಚ.ಕಿ.ಮೀ. ವ್ಯಾಪ್ತಿ ಹೊಂದಿದ್ದು ಇಲ್ಲಿ ಬುಡಕಟ್ಟು ಜನಾಂಗ ಹಾಗೂ ಇತರೆ ಅರಣ್ಯವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಮಾಲ್ದಾರೆ-ದುಬಾರೆ ವ್ಯಾಪ್ತಿಯಲ್ಲಿ ಸುಮಾರು 40 ಚ.ಕಿ.ಮೀ. ಪ್ರದೇಶ ಅಂದರೆ 11,352 ಎಕರೆ ಅರಣ್ಯಕ್ಕೆ ಸೇರಿದ್ದು ಇಲ್ಲಿಯೂ ಸಾಕಷ್ಟು ಒತ್ತುವರಿಗೊಂಡಿದ್ದು ಇತರೆ ಜನಾಂಗದವರೂ ಅಧಿಕ ಇದ್ದಾರೆ ಎನ್ನಲಾಗಿದೆ. ಮಾಲ್ಧಾರೆ ಗ್ರಾ.ಪಂ.ವ್ಯಾಪ್ತಿಯಲ್ಲಿಯೂ ಗೇಟ್‍ಹಾಡಿ, ಹಣ್ಣಿನ ತೋಟ ಹಾಡಿ, ದೊಡ್ಡಡ್ಳು, ಆಸ್ಥಾನ ಎಂಬ ಮೀಸಲು ಅರಣ್ಯಕ್ಕೆ ಒಳಪಟ್ಟ ಪ್ರದೇಶದಲ್ಲಿಯೂ ಜನವಸತಿ ಇದೆ. ಇದೀಗ ಸುಪ್ರೀಂಕೋರ್ಟ್ ಆದೇಶದನ್ವಯ ಕರ್ನಾಟಕ ಹಾಗೂ ಓಡಿಸ್ಸಾ ರಾಜ್ಯದಲ್ಲಿಯೇ ಅತ್ಯಧಿಕ ಬುಡಕಟ್ಟು ಜನ ಅರಣ್ಯ ಪ್ರದೇಶದಲ್ಲಿ ವಾಸವಿದ್ದಾರೆ ಎನ್ನಲಾಗಿದೆ.

ಚೆನ್ನಯ್ಯನಕೋಟೆಯಲ್ಲಿ ಅಲ್ಲಿಯ ಪಿಡಿಓ ರಾಜನ್ ಅವರು ನೀಡಿರುವ ಅಂಕಿಅಂಶದ ಪ್ರಕಾರ ಬುಡಕಟ್ಟು ಜನಾಂಗವೂ ಒಳಗೊಂಡಂತೆ 362 ನಿವೇಶನ ರಹಿತರು, 115 ವಸತಿ ರಹಿತರು ಪ್ರಸ್ತುತ ಹೆಸರು ನೋಂದಾವಣೆ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ನಿವೇಶನ ಹಂಚಲು ನಿವೇಶನವೇ ಇಲ್ಲ. ಇಲ್ಲಿನ ಗ್ರಾ.ಪಂ.ಹೆಸರಿನಲ್ಲಿ ಒಂದು ಎಕರೆ ನಿವೇಶನವಿದ್ದು ಗ್ರಾ.ಪಂ.ಕಚೇರಿ, ಸರ್ಕಾರಿ ಆಸ್ಪತ್ರೆ ಇದೆ. ಕಂದಾಯ ಇಲಾಖೆಗೆ ಸೇರಿದ ಸರ್ವೆ.ನಂ.45/1 ರಲ್ಲಿ 0.50 ಎಕರೆ ನಿವೇಶನವನ್ನು ಕಸವಿಲೇವಾರಿಗೆ ಗ್ರಾ.ಪಂ.ನೀಡಲು ಒಪ್ಪಿದ್ದರೂ, ಒತ್ತುವರಿಯಾಗಿದೆ ಎನ್ನಲಾಗುತ್ತಿದೆ. ಒಟ್ಟು 8.97 ಎಕರೆ ಪೈಸಾರಿ ಜಾಗದಲ್ಲಿ ಹಿಂದೂ ರುದ್ರಭೂಮಿ ಹೊರತು ಪಡಿಸಿದರೆ ಎಲ್ಲವೂ ಒತ್ತುವರಿಯಾಗಿದೆ ಎನ್ನಲಾಗಿದೆ.

ಇದೇ ಕಾರಣವಾಗಿ ಇಂದು ನಿವೇಶನರಹಿತರು ಅರಣ್ಯಭೂಮಿಯಲ್ಲಿಯೇ ದಿಢೀರ್ ಗುಡಾರ ನಿರ್ಮಿಸಿ ಪುನರ್ವಸತಿಗಾಗಿ ಹೋರಾಟ ಮಾಡುವದು ಹೆಚ್ಚುತ್ತಿದೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ ಕಂದಾಯ ಭೂಮಿಯನ್ನು ಸರ್ವೆ ಕಾರ್ಯ ನಡೆಸಿ ಅರ್ಹ ನಿವೇಶನರಹಿತರಿಗೆ ನೀಡಲು ಜಿಲ್ಲಾಡಳಿತ ಮುಂದಾದಲ್ಲಿ ಅರಣ್ಯಭೂಮಿ ಮೇಲಿನ ಒತ್ತಡ ನಿವಾರಿಸಲು ಸಾಧ್ಯವಿದೆ. ಮತ್ತೊಂದು ‘ದಿಡ್ಡಳ್ಳಿ’ ಹೋರಾಟ ನಡೆಯದಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚರವಹಿಸುವ ಅಗತ್ಯವಿದೆ.

ವಿಶೇಷ ವರದಿ: ಟಿ.ಎಲ್.ಶ್ರೀನಿವಾಸ್