ಪ್ರತÉ್ಯೀಕ್ಷ ವರದಿ : ರಫೀಕ್ ತೂಚಮಕೇರಿ ಪೊನ್ನಂಪೇಟೆ, ಮಾ. 18 : ಕಾಡು ಹಂದಿಯ ಆಸೆಗಾಗಿ ಬೇಟೆಗಾರರು ಹೆಣೆದ ಉರುಳಿಗೆ ಅನಿರೀಕ್ಷಿತವಾಗಿ ಸಿಲುಕಿಕೊಂಡ ಹುಲಿಯೊಂದು ಅಲ್ಲಿಂದ ಬಿಡಿಸಿಕೊಳ್ಳಲಾಗದೆ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ ಘಟನೆ ದ.ಕೊಡಗಿನ ಶ್ರೀಮಂಗಲ ಸಮೀಪದ ಹರಿಹರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಂದಾಜು ಒಂದೂವರೆ ವರ್ಷ ಪ್ರಾಯದ ಗಂಡು ಹುಲಿ ಕಿಡಿಗೇಡಿಗಳ ಕುಕೃತ್ಯಕ್ಕೆ ಬಲಿಯಾಗಿದೆ.
ಹರಿಹರ ಗ್ರಾಮದ ಬಾಚಿರ ಪ್ರದೀಪ್ ಕುಶಾಲಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಈ ಘಟನೆ ಸಂಭವಿಸಿದೆ. ಪ್ರದೀಪ್ ಕುಶಾಲಪ್ಪ ಅವರು ಎಂದಿನಂತೆ ಸೋಮವಾರ ಬೆಳಿಗ್ಗೆ ತಮ್ಮ ತೋಟಕ್ಕೆ ತೆರಳಿದಾಗ ತೋಟದ ಬೇಲಿಯಂಚಿನಲ್ಲಿ ಹುಲಿಯೊಂದು ಸತ್ತು ಬಿದ್ದಿರುವ ದೃಶ್ಯ ಎದುರಾಗಿದೆ. ಜೀವಂತ ಹುಲಿ ತೋಟದಲ್ಲಿ ಮಲಗಿರಬಹುದೆಂದು ಭಾವಿಸಿದ ಪ್ರದೀಪ್ ಕುಶಾಲಪ್ಪ ಅವರು, ಹೆದರಿಕೆಯಿಂದ ಹಿಂದಕ್ಕೆ ಹೆಜ್ಜೆಯಿರಿಸಿ ದೂರದಲ್ಲಿ ನಿಂತು ಅದರ ಚಲನವಲನವನ್ನು ಕೆಲ ನಿಮಿಷಗಳ ಕಾಲ ವೀಕ್ಷಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಗಮನಿಸಿದರೂ ಅದು ಯಾವದೇ ಚಲನವಿಲ್ಲದೆ ನಿರ್ಜೀವವಾಗಿ ಮಲಗಿದ್ದರಿಂದ ಸಂಶಯಗೊಂಡ ಪ್ರದೀಪ್, ಮತ್ತೆ ಹತ್ತಿರ ತೆರಳಿ ನೋಡಿದಾಗ ಹುಲಿಯ ಕತ್ತಿನಲ್ಲಿ ಉರುಳು ಸಿಲುಕಿಕೊಂಡ ದೃಶ್ಯ ಕಂಡು ಬಂದಿದೆ.
ಕೂಡಲೇ ಈ ವಿಷಯವನ್ನು ತಮ್ಮ ಪಕ್ಕದ ತೋಟದ ಮಾಲೀಕರಾದ ತೀತಿರ ಧರ್ಮಜ ಉತ್ತಪ್ಪ ಅವರಿಗೆ ತಿಳಿಸಿದರು. ಧರ್ಮಜ ಉತ್ತಪ್ಪ ಅವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
(ಮೊದಲ ಪುಟದಿಂದ) ಕಾಡುಹಂದಿಗಾಗಿ ಹಣೆಯಲಾಗಿದ್ದ ಈ ಬೇಲಿ ಉರುಳಿಗೆ ಭಾನುವಾರ ರಾತ್ರಿಯೇ ಈ ಹುಲಿ ಸಿಲುಕಿರಬಹುದೆಂದು ಶಂಕಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿತು. ನಂತರ ಇಲಾಖೆಯ ನಿಯಮಾನುಸಾರ ವಿಧಿ ವಿಧಾನ ಪೂರ್ಣಗೊಳಿಸಿ ಹುಲಿಯ ಮೃತ ಶರೀರವನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಮುಜೀಬ್ ರಹಿಮಾನ್ ಅವರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ದರು. ಬಳಿಕ ಸಂಜೆ ವೇಳೆ ಹುಲಿಯ ಮೃತ ಶರೀರವನ್ನು ಬೆಂಕಿಯಲ್ಲಿ ದಹಿಸಲಾಯಿತು.
ಸ್ಥಳಕ್ಕೆ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮರಿಯ ಕ್ರಿಸ್ತರಾಜು, ತಿತಿಮತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್, ಶ್ರೀಮಂಗಲ ಪೊಲೀಸ್ ಉಪ ನಿರೀಕ್ಷಕರಾದ ಹೆಚ್.ಎಸ್. ಮರಿಸ್ವಾಮಿ, ಕಾಂಗ್ರೆಸ್ ಮುಖಂಡ ತೀತಿರ ಧರ್ಮಜ ಉತ್ತಪ್ಪ, ಪರಿಸರ ತಜ್ಞ ಶ್ರೀಮಂಗಲದ ಬೋಸ್ ಮಾದಪ್ಪ, ಗ್ರಾ.ಪಂ. ಸದಸ್ಯ ಸಂದೀಪ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದರು.
ಗ್ರಾಮದ ತೋಟದಲ್ಲಿ ಹುಲಿಯೊಂದು ಹುರುಳಿಗೆ ಬಲಿಯಾದ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಜನ ಕುತೂಹಲದಿಂದ ಆಗಮಿಸಿ ದೃಶ್ಯ ವೀಕ್ಷಿಸುತ್ತಿದ್ದದು ಇಂದು ಹರಿಹರದಲ್ಲಿ ಸಾಮಾನ್ಯವಾಗಿತ್ತು.