ವೀರಾಜಪೇಟೆ, ಮಾ. 19: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಕಲೆಹಾಕಲು ವೀರಾಜಪೇಟೆ ನಗರ ಠಾಣೆಗೆ ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕ ಉಮೇಶ್ ಕುಮಾರ್ ಭೇಟಿ ನೀಡಿದ್ದರು.
ವೀರಾಜಪೇಟೆ ತಾಲೂಕು ಗಡಿಭಾಗದಲ್ಲಿ ಹಣ ಇನ್ನಿತರ ವಸ್ತುಗಳ ಬಗ್ಗೆ ಸೂಕ್ತವಾಗಿ ತಪಾಸಣೆಗೆ ಒಳಪಡಿಸಿ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಮತ್ತು ನಕ್ಸಲ್ ಪೀಡಿತ ಪ್ರದೆÉೀಶಗಳಲ್ಲಿ ಹೆಚ್ಚುವರಿ ಬಂದೋಬಸ್ತು ಒದಗಿಸಿ ಸುಲಲಿತ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಪೊಲೀಸ್ ಅಧಿಕಾಗಳಿಗೆ ಐಜಿ ಸೂಚಿಸಿದರು.
ಸಭೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್ಪಿ ನಾಗಪ್ಪ, ವೃತ್ತ ನಿರೀಕ್ಷಕರುಗಳು, ಠಾಣಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಸುಂಟಿಕೊಪ್ಪ: ಲೋಕಸಭಾ ಚುನಾವಣೆಯ ಸಂಬಂಧ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಉಮೇಶ್‍ಕುಮಾರ್ ಸುಂಟಿಕೊಪ್ಪದ 139 ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.
ಯಾವದೇ ಅಹಿತಕರ ಘಟನೆ ನಡೆಯದಂತೆ ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆಯಬೇಕು. ಸ್ಥಳೀಯರು ಸಣ್ಣಪುಟ್ಟ ವಿಷಯಕ್ಕೆ ವಾಗ್ಯುದ್ದ ಮಾಡದೆ ಪೊಲೀಸರಿಗೆ ಸಹಕಾರ ನೀಡುವಂತೆ ಕೋರಿದರು.
ವಾಹನ ಚಾಲಕರ ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಾಶರೀಫ್ ಚುನಾವಣಾ ಕೆಲಸಕ್ಕೆ ವಾಹನ ಚಾಲಕರನ್ನು ಬಳಸುತ್ತಿದ್ದು ಇವರುಗಳು ಮತದಾನ ಮಾಡಲು ಅವಕಾಶ ಸಿಗುತ್ತಿಲ್ಲ. ಸ್ವಕ್ಷೇತ್ರಕ್ಕೆ ಬಂದು ಮತದಾನ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಎಸ್ಪಿಗೆ ಸೂಚಿಸಿದರು.
ಕಾಫಿ ತೋಟದ ಕಾರ್ಮಿಕರಿಗೆ ಚುನಾವಣೆ ದಿನ ರಜೆ ನೀಡಬೇಕು ಕೆಲವು ತೋಟ ಮಾಲೀಕರು ಅಂದು ಕೆಲಸ ನೀಡುವದರಿಂದ ಅವರು ಮತದಾನದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಅಂಬೆಕಲ್ ಚಂದ್ರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ತೋಟ ಮಾಲೀಕರಿಗೆ ಸ್ಪಷ್ಟ ನಿರ್ದೇಶನ ನೀಡಿ ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ನೀಡಲಾಗುವದೆಂದೂ ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ದಿನಕರ ಶೆಟ್ಟಿ, ಸರ್ಕಲ್ ಇನ್ಸ್‍ಪೆಕ್ಟರ್ ದಿನೇಶ್ ಕುಮಾರ್, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕಂದಾಯ ಪರಿವೀಕ್ಷಕ ಶಿವಪ್ಪ, ಸುಂಟಿಕೊಪ್ಪ ಜಯರಾಂ ಹಾಜರಿದ್ದರು.