ಗೋಣಿಕೊಪ್ಪಲು, ಮಾ. 19; ಬಾಳೆಲೆ ಸಮೀಪ ಜಾಗಲೆ ಗ್ರಾಮದಲ್ಲಿ ಸೆರೆಯಾಗಿದ್ದ ಮೊಸಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಬರುವ ಡಿ.ಬಿ. ಕುಪ್ಪೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನಲ್ಲಿ ತಾ.17 ರಂದು ಅಪರಾಹ್ನ ಬಿಡುಗಡೆ ಮಾಡಲಾಗಿದೆ.

ಮೊಸಳೆಯ ಬಾಯಿಯ ಸಮೀಪ ದೊಡ್ಡ ಗಾಯವಾಗಿದ್ದು, ಆಹಾರಕ್ಕಾಗಿ ತನ್ನ ಬೇಟೆಯೊಂದಿಗೆ ಸೆಣೆಸಾಡಬೇಕಾದ ಸಂದರ್ಭ ಗಾಯವಾಗಿರಬಹುದು ಎಂದು ಶ್ರೀಮಂಗಲ ಪಶುವೈದ್ಯರಾದ ಡಾ.ಗಿರೀಶ್ ಅವರು ಶಕ್ತಿಗೆ ತಿಳಿಸಿದ್ದಾರೆ.

ಮೊಸಳೆಗೆ ಆದ ಗಾಯದ ಮೇಲೆ ನೊಣಗಳು ಕೂರದಂತೆ ಔಷಧಿಯನ್ನು ಸಿಂಪಡಿಸಿರುವದಾಗಿ ತಿಳಿಸಿದ ಡಾ. ಗಿರೀಶ್ ಅವರು, ಮೊದಲಿಗೆ ಮೈಸೂರು ಮ್ರೃಗಾಲಯದಲ್ಲಿರುವ ಪ್ರಾಣಿಗಳ ಪುನರ್ ವಸತಿ ಕೇಂದ್ರದಲ್ಲಿ ಮೊಸಳೆಗೆ ಸೂಕ್ತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಮೃಗಾಲಯದಲ್ಲಿ ಮೊಸಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆ ಕಬಿನಿ ಹಿನ್ನೀರಿಗೆ ಬಿಡಲಾಯಿತು ಎಂದು ತಿಳಿಸಿದ್ದಾರೆ

ಮೊಸಳೆಗೆ ಆದ ಗಾಯವು ವಾಸಿಯಾಗಲು ಸಾಧ್ಯವಿದೆ. ಮೊಸಳೆಯ ಬಾಯಿಯ ಭಾಗವನ್ನು ಬಿಗಿಯಾಗಿ ಕಟ್ಟಿಲ್ಲವಾದ್ದರಿಂದ ಉಸಿರಾಟಕ್ಕೆ ತೊಂದರೆಯಾಗಿಲ್ಲ ಹಾಗೂ ಆರೋಗ್ಯವಾಗಿತ್ತು ಎಂದು ದೃಢಪಡಿಸಿದ್ದಾರೆ.

ಜಾಗಲೆ ಗ್ರಾಮದ ಅಳಮೇಂಗಡ ಚಂಗಪ್ಪ ಅವರ ಕೆರೆಯನ್ನು ಮೊಸಳೆ ನೀರಿಗಾಗಿ ಆಶ್ರಯಿಸಿದ ಸಂದರ್ಭ ವೈಲ್ಡ್ ಲೈಫ್ ಫಸ್ಟ್ ಸದಸ್ಯ ಚೆಕ್ಕೇರ ಸೂರ್ಯ ಅಯ್ಯಪ್ಪ ಅವರ ಸಮಕ್ಷಮದಲ್ಲಿ ತಾ.16 ರಂದು ರಾತ್ರಿ 9 ಗಂಟೆ ಸುಮಾರಿಗೆ ಮೊಸಳೆಯನ್ನು ಕಾರ್ಮಿಕರ ಸಹಕಾರದೊಂದಿಗೆ ಅಲ್ಲಿನ ಕಾಫಿಕಣದಲ್ಲಿ ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿತ್ತು.

ಪೊನ್ನಂಪೇಟೆ ವಲಯಾರಣ್ಯಾಧಿಕಾರಿ ಗಂಗಾಧರ್ ಮತ್ತು ಸಿಬ್ಬಂದಿಗಳು ತಾ.17 ರ ಮಧ್ಯಾಹ್ನ ಮೊಸಳೆಯನ್ನು ಪಿಕ್ ಅಪ್ ಜೀಪಿನಲ್ಲಿ ಪೊನ್ನಂಪೇಟೆ ಅರಣ್ಯಕಚೇರಿಗೆ ತಂದು ವೈದ್ಯರ ತಪಾಸಣೆ ಬಳಿಕ ಬಿಡುಗಡೆಗೆ ಕೊಂಡೊಯ್ದುರು.

ಈ ಹಿಂದೆ ತಿತಿಮತಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಫಿತೋಟ ಮಾಲೀಕರ ಕೆರೆಗೆ ನುಸುಳಿದ್ದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವೈಫಲ್ಯಗೊಂಡ ಪರಿಣಾಮ ಮೊಸಳೆಯೊಂದು ಕೆರೆಯಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿತ್ತು.

ಇದೀಗ ಜಾಗಲೆಯಲ್ಲಿ ಕಾರ್ಮಿಕರ ಯಶಸ್ವೀ ಕಾರ್ಯಾ ಚರಣೆಯಿಂದ ಮೊಸಳೆ ಸೆರೆ ಯಾಗಿದ್ದು, ನಂತರ ಅರಣ್ಯ ಇಲಾಖೆ ಸಾಗಾಟ ಸಂದರ್ಭ ಸಾವನ್ನಪ್ಪಿರ ಬಹುದು ಅನ್ನುವ ವದಂತಿ ತಾ.18 ರಂದು ಹರಡಿತ್ತು. ಆದರೆ ಇದೀಗ ವೈದ್ಯರ ವರದಿಯಿಂದ ಮೊಸಳೆ ಸುರಕ್ಷಿತವಾಗಿರುವದು ದೃಢಪಟ್ಟಿದೆ.

- ಟಿ.ಎಲ್. ಶ್ರೀನಿವಾಸ್