ಮಡಿಕೇರಿ, ಮಾ. 18: ಸಾಮಾನ್ಯ ಕಾರ್ಯಕರ್ತನನ್ನೂ ಚುನಾವಣೆಗೆ ನಿಲ್ಲಿಸಿದರೂ ಗೆಲ್ಲಿಸಿಕೊಡುವಂಥ ಸಾಮಥ್ರ್ಯ ಕೊಡಗು ಬಿಜೆಪಿಗಿದ್ದು, ತಾನು ರಾಜಕೀಯದ ಪ್ರಾಥಮಿಕ ತರಬೇತಿಯನ್ನು ಮುಗಿಸಿ ಇದೀಗ ಮತ್ತೊಂದು ಅವಧಿಗೆ ಜನರ ಸೇವೆ ಮಾಡಲು ಚುನಾವಣೆಗೆ ಸ್ಪರ್ಧಿಸಿರುವದಾಗಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದ್ದಾರೆ.ಲೋಕಸಭಾ ಚುನಾವಣೆಗೆ ಇಂದಿಗೆ ಸರಿಯಾಗಿ ಒಂದು ತಿಂಗಳು ಬಾಕಿಯಿರುವಂತೆಯೇ ಕಾರ್ಯಕರ್ತರ ಭೇಟಿ ಮಾಡುತ್ತಿರುವ ಬಿಜೆಪಿ ಪ್ರಮುಖರು ಸೋಮವಾರ ಪೆರಾಜೆ, ಚೆಂಬು, ಸಂಪಾಜೆ, ಮದೆನಾಡು, ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ ಗ್ರಾಮಗಳಿಗೆ ತೆರಳಿ ಪ್ರತಾಪ್ ಸಿಂಹ ಪರ ಪ್ರಚಾರ ಕೈಗೊಂಡರು.ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭ ಆಯೋಜಿತ ಸಭೆಗಳಲ್ಲಿ ಬಿಜೆಪಿ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಹ. 5 ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಮತದಾರರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಿದ್ದೆ. ಈಗ ರಾಜಕೀಯ ರಂಗದಲ್ಲಿ ತನ್ನ ತರಬೇತಿ ಅವಧಿ ಮುಗಿದಿದ್ದು, ರಾಜಕೀಯ ಕ್ಷೇತ್ರದ ಅನುಭವ ಪಡೆದುಕೊಂಡಿರುವೆ. ಸಣ್ಣಪುಟ್ಟ (ಮೊದಲ ಪುಟದಿಂದ) ವ್ಯತ್ಯಾಸಗಳ ತಿಳುವಳಿಕೆ ಖಂಡಿತಾ ತನಗಾಗಿದೆ. ಬಿಜೆಪಿಯ ಭದ್ರಕೋಟೆ ಯಾಗಿರುವ ಕೊಡಗು ಜಿಲ್ಲೆಗೆ ನಿರೀಕ್ಷಿತ ರೀತಿಯಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಬಲಗೊಳಿಸುವ ನಿಟ್ಟಿನಲ್ಲಿ ಮುಖಂಡರ ಸೂಚನೆಯಂತೆ ಕಾರ್ಯಪ್ರವೃತ್ತನಾಗಿದ್ದರಿಂದ ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ಬಿಜೆಪಿ ಶಾಸಕರು ವಹಿಸಿಕೊಂಡಿದ್ದರು. ಇದೀಗ ಮೈಸೂರು ಜಿಲ್ಲೆಯಲ್ಲಿಯೂ ಬಿಜೆಪಿ ಪ್ರಬಲವಾಗಿದ್ದು ಈ ಬಾರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ತನ್ನನ್ನು ಮತದಾರರು ಗೆಲ್ಲಿಸುವ ವಿಶ್ವಾಸವಿದೆ ಎಂದು ಹೇಳಿದರು. ತನ್ನನ್ನು ಈ ಬಾರಿಯೂ ಮತದಾರರು ಗೆಲ್ಲಿಸಿದ ಸಂದರ್ಭ ಯಾವದೇ ದೂರುಗಳಿಗೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿ ಸುವೆ. ಗ್ರಾಮೀಣ ಪ್ರದೇಶಗಳಿಗೆ ಸ್ಥಳೀಯರನ್ನು ಸಂಪರ್ಕಿಸಿಯೇ ಸೂಕ್ತ ರೀತಿಯಲ್ಲಿ ಅನುದಾನ ನೀಡುವದಾಗಿ ಭರವಸೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‍ನಿಂದ ಮೊದಲ್ಗೊಂಡು ಲೋಕಸಭಾ ಕ್ಷೇತ್ರದವರೆಗೂ ಬಿಜೆಪಿ ಪ್ರತಿನಿಧಿಗಳಿರುವದು ವಿಶೇಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಕೊಡಗಿನ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಕೇಂದ್ರ ಸರ್ಕಾರ ನೀಡಿದ 522 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಬಳಕೆ ಮಾಡಲಿಲ್ಲ. ಇನ್ಫೋಸೀಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರೂ ತನ್ನ ಮೂಲಕ ಕೊಡಗಿನ ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ತನ್ನ ಗೆಳೆಯ ಫಡ್ನವೀಸ್ ಎಂಬವರು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದರೂ ಸರ್ಕಾರ ಸೂಕ್ತ ನಿವೇಶನ ಗುರುತಿಸದೇ ವಿಳಂಬ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, 1991ರಲ್ಲಿ ಮಂಗಳೂರು ಕ್ಷೇತ್ರವಿದ್ದಾಗಿನಿಂದಲೂ ಕೊಡಗು ಜಿಲ್ಲೆಯ ಮತದಾರರು ಬಿಜೆಪಿಗೇ ಮತನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಬಿಜೆಪಿಗೆ ಕೊಡಗಿನ ಮತದಾರರು ಆಶೀರ್ವಾದ ಮಾಡಲಿರುವದು ಖಂಡಿತಾ. ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಮೋದಿಗೆ ಮತ್ತೊಂದು ಬಾರಿ ಪ್ರಧಾನಿಯಾಗಲು ಅವಕಾಶ ನೀಡುವ ನಿಟ್ಟಿನಲ್ಲಿಯೂ ಕೊಡಗು-ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕೆಂದು ಬೋಪಯ್ಯ ಸಲಹೆ ನೀಡಿದರು. ಗೆಲುವಿನ ಬಗ್ಗೆ ಆತ್ಮವಿಶ್ವಾಸವಿರಲಿ, ಅತೀ ವಿಶ್ವಾಸದಿಂದ ಮೈಮರೆಯಬೇಡಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ದೇಶದ ಪ್ರಗತಿ ಕುಂಠಿತಗೊಳಿಸಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆಯುತ್ತಿದ್ದು ಇಂಥವರಿಂದ ಭಾರತವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿಯಾಗಿ ಮೋದಿ ಮರು ಆಯ್ಕೆಯಾಗಲೇಬೇಕಾಗಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ಪ್ರಧಾನಿ ಮೋದಿಯವರ ಕಾರ್ಯ ವೈಖರಿಯನ್ನು ಪ್ರತೀ ಯೋರ್ವ ಭಾರತೀಯನೂ ಮೆಚಿ ್ಚಕೊಂಡಿದ್ದು, ಜಗತ್ತಿನ ಅಗ್ರಗಣ್ಯ ಮುಖಂಡರೂ ಮೋದಿಯ ಬಗ್ಗೆ ಪ್ರಶಂಸೆಯ ಮಾತನಾಡಿದ್ದಾರೆ. ಹೀಗಿರುವಾಗ ಮತ್ತೆ ಪ್ರಧಾನಿಯಾಗಿ ಮೋದಿಯವರನ್ನು ಆಯ್ಕೆ ಮಾಡಬೇಕಾಗಿರುವದು ಮತದಾರರ ಕರ್ತವ್ಯವಾಗಬೇಕೆಂದು ಹೇಳಿದರು.

ಬಿಜೆಪಿ ಮುಖಂಡ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಮಹಾಘಟ್ ಬಂಧನ್ ಹೆಸರಿನಲ್ಲಿ ಮೋದಿಯನ್ನು ಸೋಲಿಸಲು ಷಡ್ಯಂತ್ರ ರೂಪಿಸುತ್ತಿರುವ ರಾಜಕಾರಣಿಗಳಿಗೆ ಈ ಚುನಾವಣೆಯಲ್ಲಿ ಭಾರತದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿÂ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪ್ರಮುಖರಾದ ಡೀನ್ ಬೋಪಣ್ಣ , ಪ್ರಸನ್ನ ತಮ್ಮಯ್ಯ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರಕಳಗಿ, ಎಪಿಎಂಸಿ ಸದಸ್ಯ ಕೊಡಪಾಲ್ ಗಣಪತಿ ಸೇರಿದಂತೆ ಬಿಜೆಪಿ ಪ್ರಮುಖರು, ಆಯಾ ಗ್ರಾ.ಪಂ. ಪ್ರತಿನಿಧಿಗಳು, ಕಾರ್ಯಕರ್ತರು ಹಾಜರಿದ್ದರು.

ಪೆರಾಜೆ ವರದಿ

ಮುಂದಿನ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಹಾಗೂ ಈ ಹಿಂದಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಪೆರಾಜೆ ಭೇಟಿ ಕಾರ್ಯಕ್ರಮವು ಸೋಮವಾರದಂದು ನಡೆಯಿತು.

ಸಭೆಯಲ್ಲಿ ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯ ಮಂತ್ರಿಯಾದ ಮನೋಹರ್ ಪರಿಕ್ಕರ್ ಅವರ ನಿಧನಕ್ಕೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕರ್ತರ ಪರವಾಗಿ ಪೆರಾಜೆ ಗ್ರಾಮದ ಕೆಲವೊಂದು ಸಮಸ್ಯೆಗಳನ್ನು ಹೊನ್ನಪ್ಪ ಅಮೆಚೂರ್ ಮತ್ತು ಅಶೋಕ್ ಪೀಚೆಮನೆ ಅವರು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಪೂವಪ್ಪ ಮಾಸ್ತರ್ ದೊಡ್ಡಡ್ಕ, ಇಬ್ರಾಹಿಂ, ಕೃಷ್ಣ ದಾಸರ ಹಿತ್ತಿಲು ಸೇರಿದಂತೆ ಇನ್ನೂ ಅನೇಕರನ್ನು ಸಂಸದರು ಪಕ್ಷಕ್ಕೆ ಬರಮಾಡಿಕೊಂಡರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಪೆರಾಜೆ ಗ್ರಾಮವು ಈ ಹಿಂದಿನ ಅವದಿಯಲ್ಲಿ ಅಧಿಕ ಮತಗಳನ್ನು ನೀಡಿ ನನ್ನ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗ್ರಾಮ ವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಇದೇ ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು. ಗ್ರಾಮದ ಪ್ರಮುಖ ಸಮಸ್ಯೆಗಳಾದ ಗ್ರಾಮದಲ್ಲಿ ಟವರ್ ಹಾಗೂ ಭಾಗಮಂಡಲ, ಪಟ್ಟಿ, ತೊಡಿಕಾನ, ಪೆರಾಜೆ ರಸ್ತೆಯ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇನೆಂದು ಭರವಸೆ ನೀಡಿದರು.

ಈ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಬಿ.ಜೆ.ಪಿ ಪ್ರಮುಖರಾದ ರವಿಕುಶಾಲಪ್ಪ, ತೆಕ್ಕಡೆ ಶೋಭ, ತಳೂರ್ ಕಿಶೋರ್ ಕುಮಾರ್, ಬಾಲಚಂದ್ರ ಕಳಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯ ನಾಯಕರು ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಹಾಜರಿದ್ದರು.

ಕಾರ್ಯಕ್ರಮವನ್ನು ಪೆರಾಜೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ಸ್ವಾಗತಿಸಿ, ಗ್ರಾಮಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ನಿರೂಪಣೆಯೊಂದಿಗೆ ಗ್ರಾಮಸಮಿತಿ ಅಧ್ಯಕ್ಷ ಮೋನಪ್ಪ ಕುಂಬಳಚೇರಿ ವಂದಿಸಿದರು.