ವೀರಾಜಪೇಟೆ, ಮಾ.19 : ಕಳೆದ ಐದು ವರ್ಷಗಳಿಂದ ಸಂಸದ ಜನಪ್ರತಿನಿಧಿ ಇಲ್ಲದೆ ಕೊಡಗು ಅನಾಥವಾಗಿತ್ತು. ಇದರಿಂದ ಕೊಡಗಿನ ಜನತೆ ಕೇಂದ್ರ ಸರಕಾರದ ಸೌಲಭ್ಯಗಳಿಂದಲೂ ವಂಚನೆ ಗೊಳಗಾಗಿದ್ದರು. ಈ ಚುನಾವಣೆಯಲ್ಲಿ ಹೊಸ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಕೊಡಗಿನ ಜನತೆಗೆ ಸಂದರ್ಭ ಒದಗಿದೆ ಎಂದು ಜನತಾದಳದ ಮಾಜಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು ಕಳೆದ ಎಂಟು ತಿಂಗಳ ಹಿಂದೆ ಕೊಡಗಿನಲ್ಲಿ ಉಂಟಾದ ಭೀಕರ ಪ್ರಕೃತಿ ವಿಕೋಪದಲ್ಲಿ ಸಾವಿರಾರು ಮಂದಿ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡು ಸಂತ್ರಸ್ತರು ಬೀದಿ ಪಾಲಾದಾಗ ಕೊಡಗು ಕ್ಷೇತ್ರದ ಸಂಸದರೆನಿಸಿಕೊಂಡವರು ಕೊಡಗಿಗೆ ಒಮ್ಮೆಯೂ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಪರಿಹಾರವನ್ನು ಒದಗಿಸಿಲ್ಲ.ಕೊಡಗಿನ ರೈತರು, ಬೆಳೆಗಾರರು ಸಂಕಷ್ಟದಿಂದ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೂ ಅವರಿಗೂ ಕೇಂದ್ರ ಸರಕಾರದೊಂದಿಗೆ ಸಂಪರ್ಕಿಸಿ ಪರಿಹಾರ ಒದಗಿಸದಿರುವದು ಕೊಡಗಿನ ಜನತೆಯ ದುರದೃಷ್ಟ. ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಮಾಜ ಸೇವೆ, ಜನತೆಯ ಸಮಸ್ಯೆಗಳಿ ಸ್ಪಂದಿಸಿ ಪರಿಹಾರ ಒದಗಿಸುವ ಒಬ್ಬ ಸಮರ್ಥ ಜನಪ್ರತಿನಿಧಿಯ ಅಗತ್ಯವಿದೆ. ರಾಜಕೀಯ ಹಾಗೂ ಎರಡು ಅವಧಿ ಸಂಸದನಾಗಿ ಅನುಭವವಿರುವ ಮೈತ್ರಿಕೂಟದ ಅಭ್ಯರ್ಥಿ ವಿಜಯಶಂಕರ್‍ನನ್ನು ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಬೇಕು ಎಂದರು.

ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್ ಮಾತನಾಡಿ ರಾಜಕೀಯ ಹಾಗೂ ಸಂಸದನಾಗಿ ಅನುಭವವಿದ್ದು ಪಕ್ಷದ ಮುಖಂಡರ, ಕಾರ್ಯಕರ್ತರ ಹಿತೈಷಿಗಳ ಬೇಡಿಕೆಯಂತೆ ಕೊಡಗಿನ ಜನತೆಯ ಸೇವೆಗಾಗಿ ಸ್ಪರ್ಧಾಕಣದಲ್ಲಿದ್ದೇನೆ. ಕೊಡಗಿನ ಯಾವದೇ ಮೂಲ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ನೇರವಾಗಿ ಸ್ಪಂದಿಸುತ್ತೇನೆ ಎಂದರು.

ಸಭೆಯನ್ನುದ್ದೇಶಿಸಿ ಕೆ.ಪಿ.ಸಿ.ಸಿ. ವೀಕ್ಷಕ ವೆಂಕಪ್ಪ ಗೌಡ, ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್.ಮತೀನ್ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡ ಟಿ.ಪಿ. ರಮೇಶ್, ಶ್ಯಾಮ್ ಜೋಸೆಫ್, ಉಪಸ್ಥಿತರಿದ್ದರು.

ಜೆಡಿಎಸ್ ನಗರ ಸಮಿತಿಯ ಪಿ.ಎ.ಮಂಜುನಾಥ್, ಕಾಂಗ್ರೆಸ್ ಪಕ್ಷದ ಜಿ.ಜಿ.ಮೋಹನ್, ನರೇಂದ್ರ ಕಾಮತ್, ಎರಡು ಪಕ್ಷಗಳ ಕಾರ್ಯಕರ್ತರುಗಳು ಹಾಜರಿದ್ದರು. ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಸ್ವಾಗತಿಸಿದರು. ನಗರ ಸಮಿತಿಯ ಎಂ.ಎಂ.ಶಶಿಧರನ್ ವಂದಿಸಿದರು.