ಬರಿದಾದ ಬದುಕಿನಲ್ಲಿ ಬಣ್ಣದ ರಂಗನ್ನು ಚೆಲ್ಲೋ ರಂಗು ರಂಗಿನ ಹಬ್ಬವೇ ಹೋಳಿ. ಬಣ್ಣದ ಓಕುಳಿಯನ್ನ ಎರಚಾಡಿ ಸಂಭ್ರಮಿಸೋ ಈ ಹಬ್ಬ.
ಉಲ್ಲಾಸ ತರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರ ವೇರಿಸುವದು ಹೋಳಿ ಹಬ್ಬದ ವಿಶೇಷ. ವಿವಿಧ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬವಿದು. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ-ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ.
ಬಣ್ಣಗಳ ಓಕುಳಿಯಾಟ ಸರ್ವ ಮತಬಾಂಧವರನ್ನು ಒಂದುಗೂಡಿಸುತ್ತದೆ. ಜಾತಿ ಮತಗಳ ಭೇದವಿಲ್ಲದೆ ಆಚರಿಸುವ ಬಣ್ಣಗಳ ಹಬ್ಬ ಹೋಳಿ ತನ್ನದೇ ಆಚಾರ ಸಂಪ್ರದಾಯಗಳನ್ನು ಹೊಂದಿದೆ. ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ.
ಲಂಬಾಣಿ ಜನಾಂಗದವರು ಹೋಳಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಹೋಳಿ ಹಬ್ಬಕ್ಕೆ ಧೂಂಡ ಎನ್ನುತ್ತಾರೆ. ಕೋಲ್ಕತದಲ್ಲಿ ದೋಲ್ ಪೌರ್ಣಿಮ ಎಂದು ಆಚರಿಸುತ್ತಾರೆ.
ಹೋಳಿ ಆಟಕ್ಕೆ ಬಣ್ಣಗಳ ಆಯ್ಕೆಯನ್ನು ಮಾಡುವಾಗ ಆದಷ್ಟು ಹರ್ಬಲ್ ಇಲ್ಲವೇ ನೈಸರ್ಗಿಕವಾಗಿರುವ ಬಣ್ಣಗಳನ್ನು ಬಳಸಿ. ಬಿಳಿ, ಹಸಿರು ಇವೇ ಮೊದಲಾದ ಹೆಚ್ಚು ಗಾಢವಾಗಿಲ್ಲದ ಬಣ್ಣಗಳನ್ನು ಬಳಸಿ. ಇದರಿಂದ ಇತರರೂ ನಿಮ್ಮನ್ನು ಅನುಸರಿಸುತ್ತಾರೆ ಮತ್ತು ತ್ವಚೆಯ ರಕ್ಷಣೆಯನ್ನು ನಿಮಗೆ ಮಾಡಿಕೊಳ್ಳಬಹುದು.
ಹೋಳಿ ಆಟವಾಡಿದ ನಂತರ ಬಣ್ಣವನ್ನು ತೊಳೆಯವ ಕೆಲಸ ಬಾಕಿ ಇರುತ್ತದೆ. ನಿಮ್ಮ ಮೈಗೆ ಕಡಿಮೆ ಬಣ್ಣ ಮೆತ್ತಿಕೊಂಡಿದ್ದರೂ ಅದನ್ನು ತೆಗೆಯಲು ನಿರ್ಲಕ್ಷ್ಯಪಡಬೇಡಿ. ಅವುಗಳು ಒದ್ದೆ ಇರುವಾಗಲೇ ಬಣ್ಣವನ್ನು ತೊಡೆಯಲು ಪ್ರಯತ್ನಿಸಿ. ಬಣ್ಣ ಒಣಗಿದ ನಂತರ ತೊಡೆದು ಹಾಕುವದು ಕಷ್ಟಕರವಾಗಿರುತ್ತದೆ.
ನಿಮ್ಮ ದೇಹದಿಂದ ನೀವು ಹೋಲಿ ಬಣ್ಣವನ್ನು ತೊಡೆದುಕೊಂಡಿದ್ದರೂ ನಿಮ್ಮ ದೇಹಕ್ಕೆ ಸಾಕಷ್ಟು ಮಾಯಿಶ್ಚರೈಸರ್ ಅನ್ನು ಬಳಸಿ. ಇದರಿಂದ ರಾಸಾಯನಿಕಗಳ ಹಾನಿಯನ್ನು ತಗ್ಗಿಸಿಕೊಳ್ಳಬಹುದಾಗಿದೆ.
- ಯಜಾಸ್ ದುದ್ದಿಯಂಡ, ವೀರಾಜಪೇಟೆ.