ಮಡಿಕೇರಿ, ಮಾ. 18: ಹಿಂದೆಂದಿಗಿಂತಲೂ ಭಾರತದಲ್ಲಿ ಈ ಬಾರಿಯ 17ನೇ ಲೋಕಸಭಾ ಚುನಾವಣೆ ಸಂಭ್ರಮದಿಂದ ಕೂಡಿದ್ದು, ದೇಶದ ಸಾರ್ವಭೌಮತೆಗಾಗಿ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ ಡಾ. ವಾಮನಾಚಾರ್ಯ ಆಶಿಸಿದರು. ನಗರಕ್ಕೆ ಭೇಟಿ ನೀಡಿದ್ದ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಹಿಂದಿನ ಚುನಾವಣೆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದು, ಇಡೀ ದೇಶದಲ್ಲಿ ಪ್ರಚಾರ ನಡೆಸುವ ಮೂಲಕ ಬಹುಮತದೊಂದಿಗೆ ಪ್ರಧಾನಿಯಾದ ಹೆಗ್ಗಳಿಕೆ ಮೋದಿ ಅವರಿಗಿದೆ ಎಂದರು. ಈ ಐದು ವರ್ಷಗಳಲ್ಲಿ ರಾಷ್ಟ್ರದ ಸುರಕ್ಷತೆ, ಆರ್ಥಿಕ ಸ್ವಾವಲಂಬನೆ, ಸೇನಾ ಸಾಮಥ್ರ್ಯ ಹೆಚ್ಚಳ ಸೇರಿದಂತೆ ಮಹಿಳೆಯರು, ಮಕ್ಕಳು, ರೈತರ ಕಲ್ಯಾಣಕ್ಕಾಗಿ ದೂರ ದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ನೆನಪಿಸಿದರು. ಅಲ್ಲದೆ, ಹಿಂದಿನ ಯುಪಿಎ ಸರಕಾರಗಳ ಎರಡು ಅವಧಿಯ ಹಗರಣದಿಂದ ರಾಷ್ಟ್ರವನ್ನು ಮುಕ್ತಗೊಳಿಸಿ, ಜನತೆಯಲ್ಲಿ ವಿಶ್ವಾಸ ಮೂಡಿಸಿದ ಶ್ರೇಯಸ್ಸು ಎನ್‍ಡಿಎ ಸರಕಾರದ್ದೆಂದು ಅವರು ಪ್ರತಿಪಾದಿಸಿದರು.

ಜಾತಿ ನಡೆಯೋಲ್ಲ: ಲೋಕಸಭಾ ಚುನಾವಣೆಯಲ್ಲಿ ಮತದಾರರು ಪ್ರಬುದ್ಧತೆ ತೋರುತ್ತಾ ಬಂದಿದ್ದು, ಜಾತಿ, ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಲಾರರು ಎಂದು ವ್ಯಾಖ್ಯಾನಿಸಿದ ಅವರು, ಇಂತಹ ವ್ಯವಸ್ಥೆ ವಿರುದ್ಧ ಹಾಸನ - ಮಂಡ್ಯದಲ್ಲಿ ಜನ ಸಮುದಾಯ ತಿರುಗಿಬೀಳುವಂತಾಗಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು.

ಅಚ್ಚರಿಯೇನಿಲ್ಲ : ಕರ್ನಾಟಕದಲ್ಲಿ ಮಾಜೀ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಕಾಲದಿಂದಲೂ ದೇವೇಗೌಡ ಅವರು, ಕುಟುಂಬ ರಾಜಕಾರಣದೊಂದಿಗೆ ಅಧಿಕಾರಕ್ಕಾಗಿ ಹಾತೊರೆಯುತ್ತಾ ಸಾಗಿದ್ದು, ಇಂದು ಮೊಮ್ಮಕ್ಕಳನ್ನು ಚುನಾವಣೆಗೆ ಇಳಿಸಿರುವದರಲ್ಲಿ ಯಾವದೇ ಅಚ್ಚರಿ ಇಲ್ಲವೆಂದು ವಾಮನಾಚಾರ್ ಅಭಿಪ್ರಾಯಪಟ್ಟರು. ಹೀಗಾಗಿ ಇಂದು ಅವರ ಮುಗ್ಧ ಬೆಂಬಲಿಗರೇ ವಾಸ್ತವ ತಿಳಿದು ತಿರುಗಿಬೀಳುವಂತಾಗಿದೆ ಎಂದು ಬೊಟ್ಟು ಮಾಡಿದರು.

ಸೋಲಲು ಸಾಕಷ್ಟು ಕ್ಷೇತ್ರವಿದೆ: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮುಖಂಡರು ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ವಾಮನಾಚಾರ್, ರಾಹುಲ್ ಗಾಂಧಿ ಅವರಿಗೆ ದೇಶದೆಲ್ಲೆಡೆ ಸೋಲಲು ಸಾಕಷ್ಟು ಕ್ಷೇತ್ರವಿದ್ದು, ಮೈಸೂರಿಗೆ ಇರುವ ಒಳ್ಳೆಯ ಹೆಸರು ಕೆಡಿಸಬೇಕೇಕೆ? ಎಂದು ವ್ಯಂಗ್ಯವಾಡಿದರು.

ಅಲ್ಲದೆ ಬಿಜೆಪಿಯ ಭವಿಷ್ಯದ ನಾಯಕರಾಗಿ ಹೊರಹೊಮ್ಮುವ ಸಾಮಥ್ರ್ಯದೊಂದಿಗೆ ಹಾಲೀ ಸಂಸದ ಪ್ರತಾಪ್ ಸಿಂಹ ಅವರ ಮರು ಗೆಲವು ಖಚಿತವೆಂದು ಸಮರ್ಥಿಸಿದರು. ಅಲ್ಲದೆ, ತಾವು ಈ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಬಾರಿಯೆಂದು ನೆನಪಿಸಿಕೊಂಡರು. ಕ್ಷೇತ್ರ ಸಂಚಾಲಕ ಫಣೀಂದ್ರ ಹಾಗೂ ಸಹಪ್ರಬಾರಿ ಹಿರೇಂದ್ರ ಶಾ ಈ ವೇಳೆ ಹಾಜರಿದ್ದರು.