ಗೋಣಿಕೊಪ್ಪಲು, ಮಾ.18: ಸೇನೆಯಿಂದ ನೀಡುವ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ ಪಡೆದ ಪೊನ್ನಂಪೇಟೆಯ ಯೋಧ ಎಚ್.ಎನ್. ಮಹೇಶ್ ಅವರನ್ನು ಜಿಲ್ಲಾ ಪಂಚಾಯಿತಿ ಸದಸೆÀ್ಯ ಶ್ರೀಜಾ ಸಾಜಿ ಅಚ್ಚುತ್ತನ್ ಗೌರವಿಸಿದರು. ಮಹೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಜಿ.ಪಂ. ಸದಸ್ಯರು ಮಹೇಶ್ ಅವರ ಸಾಧನೆಯನ್ನು ಶ್ಲಾಘಿಸಿದರು.
ಕಳೆದ 7 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್; ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರ ಸಮ್ಮುಖದಲ್ಲಿ ಇತ್ತೀಚೆಗೆ ಶೌರ್ಯ ಪ್ರಶಸ್ತಿ ಪಡೆದಿದ್ದರು.
ಕಳೆದ ವರ್ಷ ಜಮ್ಮು ಕಾಶ್ಮಿರದಲ್ಲಿ ನಡೆದ ಭಯೋತ್ಪಾದಕರ ದಿಢೀರ್ ಧಾಳಿ ಸಂದರ್ಭ ಕರ್ತವ್ಯದಲ್ಲಿದ್ದ ಮಹೇಶ್ ಕೂಡಲೇ ಉಗ್ರರನ್ನು ಹಿಮ್ಮೆಟ್ಟಿಸುವ ಕಾರ್ಯಚರಣೆ ಗಿಳಿದರು. ತಾವೇ ಮುನ್ನುಗ್ಗಿ ಭಯೋತ್ಪಾದಕರ ಗುಂಡಿನ ಧಾಳಿಯನ್ನೂ ಲೆಕ್ಕಿಸದೇ ಭಯೋತ್ಪಾದಕರ ಮೇಲೆ ಸತತ ಗುಂಡಿನ ದಾಳಿ ನಡೆಸಿ ಓರ್ವ ಉಗ್ರನನ್ನು ಬಲಿಪಡೆದು ಇತರರನ್ನು ಹಿಮ್ಮೆಟ್ಟಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು.
-ಹೆಚ್.ಕೆ. ಜಗದೀಶ್