ಸೋಮವಾರಪೇಟೆ,ಮಾ.18: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಲ್ಲೂ ನೀತಿ ಸಂಹಿತೆಯ ಬಿಸಿ ಕಂಡುಬರುತ್ತಿದೆ. ಇದರೊಂದಿಗೆ ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣಾ ಕಾರ್ಯ ಕಟ್ಟುನಿಟ್ಟಾಗಿ ನಡೆಯುತ್ತಿದ್ದು, ಚುನಾವಣಾ ಕಾರ್ಯಕ್ಕೆ ನಿಗದಿಯಾಗಿರುವ ಅಧಿಕಾರಿಗಳು ದಿನದ 24 ಗಂಟೆಗಳ ಕಾಲವೂ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
ಹಾಸನ-ಕೊಡಗು ಜಿಲ್ಲೆಗಳ ಗಡಿಯಾಗಿರುವ ತಾಲೂಕಿನ ಬಾಣಾವರ ಗೇಟ್ನಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದ್ದು, ಅಧಿಕಾರಿಗಳು ಹೊರಭಾಗದಿಂದ ಒಳಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ.
ವಾಹನಗಳ ನೋಂದಣಿ ಸಂಖ್ಯೆ, ಚಾಲಕನ ಹೆಸರು, ಒಳಬಂದ ಸಮಯ, ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಬಾಣಾವರ ಗೇಟ್ನಲ್ಲಿ ಸ್ಥಾಪಿಸಿರುವ ತಪಾಸಣಾ ಕೇಂದ್ರದಲ್ಲಿ ಈವರೆಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವದೇ ಪ್ರಕರಣಗಳು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರನ್ನು ಒಳಗೊಂಡಂತೆ ಓರ್ವ ಸಹಾಯಕ, ಓರ್ವ ಪೊಲೀಸ್ ಪೇದೆ, ಈರ್ವರು ಗೃಹ ರಕ್ಷಕ ದಳದ ಸಿಬ್ಬಂದಿಗಳು ಮೂರು ಪಾಳಿಯಂತೆ ದಿನದ 24 ಗಂಟೆಯೂ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.