ಹೆಬ್ಬಾಲೆ ಮಾ. 19: ಸೋಮವಾರಪೇಟೆ ತಾಲೂಕಿನ ಗಡಿಗ್ರಾಮ ಶಿರಂಗಾಲ ಗ್ರಾಮದಲ್ಲಿ ತಾ. 22 ರಂದು ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಿಯ ವಾರ್ಷಿಕ ಜಾತ್ರೋತ್ಸವಕ್ಕೆ ಗ್ರಾಮ ದೇವತಾ ಸಮಿತಿ ವತಿಯಿಂದ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ.
ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮೀಣ ಭಾಗದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶ್ರೀ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾರು ಪಾಲ್ಗೊಳ್ಳುವರು. ಅಂದು ಗ್ರಾಮದ ಕೋಟೆಯ ಗದ್ದಿಗೆಯಲ್ಲಿ ರಾತ್ರಿ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆರಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ದೇವಿಯ ಬನದಲ್ಲಿ ಹಾಕಿರುವ ಅಗ್ನಿಕೊಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆಯುವರು. ಹಬ್ಬದ ಅಂಗವಾಗಿ ಗ್ರಾಮದ ಸಂತೆಮಾಳ ಮೈದಾನದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ದೇವಸ್ಥಾನಗಳನ್ನು ಮತ್ತು ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗುತ್ತದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರ ಶೇಖರ್ ಮತ್ತು ಕಾರ್ಯದರ್ಶಿ ಸಿ.ಎನ್. ಲೋಕೆ ೀಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ಗಳು ನಡೆಯಲಿವೆ.
ತಾ. 22 ರಂದು ಬೆಳಿಗ್ಗೆ 5.30 ಗಂಟೆಗೆ ಕಾವೇರಿ ನದಿಯಿಂದ ಗಂಗೆ ಪೂಜೆ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಮಂಟಿಗಮ್ಮ ದೇವಸ್ಥಾನಕ್ಕೆ ಪ್ರವೇಶ ಮಾಡಲಾಗುತ್ತದೆ. ನಂತರ ಸೋಮವಾರಪೇಟೆ ವಿರಕ್ತ ಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಯಿಂದ ದೇವಿಯ ಬನದಲ್ಲಿ ಗಣಪತಿ ಹೋಮ, ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ಗ್ರಾಮೀಣ ಕ್ರೀಡಾಕೂಟ: ಶಿರಂಗಾಲ ಶ್ರೀ ಮಂಟಿಗಮ್ಮ ಗ್ರಾಮ ದೇವತಾ ಸಮಿತಿ ವತಿಯಿಂದ ದೇವಿಯ ಉತ್ಸವ ಅಂಗವಾಗಿ ತಾ. 20 ರಿಂದ ತಾ. 24 ರವರೆಗೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾ. 20 ಹಾಗೂ 21 ರಂದು ಎರಡು ದಿನಗಳ ಕಾಲ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್, ತಾ. 21 ಮತ್ತು 22 ರಂದು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ, ತಾ. 23 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಅಮ್ಮನವರ ದರ್ಶನ, ಪೂಜಾ ಕಾರ್ಯಕ್ರಮಗಳೊಂದಿಗೆ ಮಹಾ ಮಂಗಳಾರತಿ ನಡೆಯುತ್ತದೆ. ಬನದಲ್ಲಿ ನಡೆಯುವ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಲಿದೆ. ಮಹಿಳೆಯರಿಗೆ, ಬೆಳಿಗ್ಗೆ 10 ಗಂಟೆಯಿಂದ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಮಹಿಳೆಯರಿಗೆ ಥ್ರೋಬಾಲ್ ಪಂದ್ಯವನ್ನು ಏರ್ಪಡಿಸಲಾಗಿದೆ. ರಾತ್ರಿ 9 ಗಂಟೆಗೆ ಭಕ್ತಿ ಪ್ರಧಾನ ನಾಟಕ ನಡೆಯಲಿದೆ. ತಾ. 24 ರಂದು ಬೆಳಿಗ್ಗೆ 10 ಗಂಟೆಯಿಂದ ಸ್ಥಳೀಯರಿಗೆ ಕಬಡ್ಡಿ ಪಂದ್ಯಾಟ ಹಾಗೂ ರಾತ್ರಿ 9 ಗಂಟೆಗೆ ಶ್ರೀಮಂಟಿಗಮ್ಮ ಕೃಪಾ ಘೋಷಿತ ನಾಟಕ ಮಂಡಳಿ ವತಿಯಿಂದ ಪೌರಾಣಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ರಥೋತ್ಸವ: ತಾ. 25 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಉಮಾಮಹೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಂಗಳವಾದ್ಯ ಹಾಗೂ ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಭದ್ರೇಶ್ವರ ಕುಣಿತ, ಕಂಸಾಳೆ, ಕೀಲು ಕುದುರೆಗಳೊಂದಿಗೆ ಶ್ರೀ ಉಮಾಮಹೇಶ್ವರ ರಥೋತ್ಸವ ಜರುಗಲಿದೆ. 27 ರಂದು ಸಂಜೆ 6 ಗಂಟೆಗೆ ಶ್ರೀ ಉಮಾಮಹೇಶ್ವರಸ್ವಾಮಿ ತೆಪ್ಪೋತ್ಸವ ನಡೆಯಲಿದ್ದು, ತೆಪ್ಪೋತ್ಸವವು ಮೂಡಲುಕೊಪ್ಪಲು, ನಲ್ಲೂರುಕೊಪ್ಪಲು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು, ಶಿರಂಗಾಲ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿದ ನಂತರ ಪವಿತ್ರ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ.