ಮಡಿಕೇರಿ, ಮಾ. 19: ಜಲಪ್ರಳಯದಿಂದ ಹಾನಿಗೊಳಗಾದ ತಾಲೂಕುಗಳಿಗೆ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಬೆಳೆ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ಹಲವಾರು ಬೆಳೆಗಾರರು ತಮ್ಮ ಬೆಳೆ ನಷ್ಟದ ಮಾಹಿತಿಯನ್ನು ಗ್ರಾಮಲೆಕ್ಕಿಗರಿಗೆ ನೀಡಿರುತ್ತಾರೆ.

ಎನ್.ಡಿ.ಆರ್.ಎಫ್. ನಿಧಿಯ ನಿಯಮಗಳಂತೆ 1 ಹೆಕ್ಟೇರ್ ಭೂಮಿಗೆ 18 ಸಾವಿರ ರೂ. ನಂತೆ ಬೆಳೆ ನಷ್ಟ ಪರಿಹಾರವನ್ನು ನೀಡಲು ಅವಕಾಶವಿರುತ್ತದೆ.ಓರ್ವ ಬೆಳೆಗಾರನಿಗೆ ಎರಡು ಹೆಕ್ಟೇರ್ ನವರೆಗೆ ಪರಿಹಾರ ನೀಡುವ ನಿಯಮವಿದೆ. ಈಗಾಗಲೇ ಕಾಲಾವಧಿ ಮೀರಿದ್ದರೂ ಬೆಳೆಗಾರ ಸಂಘಟನೆಗಳ ಕೋರಿಕೆಯಂತೆ ಕೊಡಗು ಜಿಲ್ಲಾಧಿಕಾರಿ ಗಳು ಇದೇ ಮಾರ್ಚ್ 26 ಕ್ಕೆ ವಿವರ ನೀಡಲು ಕೊನೆ ದಿನಾಂಕ ನಿಗದಿಪಡಿಸಿರುತ್ತಾರೆ.

ಈವರೆಗೂ ಬೆಳೆ ನಷ್ಟ ಪರಿಹಾರಕ್ಕೆ ಹೆಸರು ನೋಂದಾಯಿಸಿ ಕೊಳ್ಳದ ಕೊಡಗಿನ ಮೂರು ತಾಲೂಕಿನ ಬೆಳೆಗಾರರು ತಮ್ಮ ಜಮೀನಿನ ಆರ್.ಟಿ.ಸಿ., ಆಧಾರ್ ಕಾರ್ಡ್ ಹಾಗೂ ಉಳಿತಾಯ ಖಾತೆಯ ವಿವರಗಳೊಂದಿಗೆ ತಾ. 26 ರೊಳಗಾಗಿ, ವಿಳಂಭ ಮಾಡದೇ ಗ್ರಾಮ ಲೆಕ್ಕಿಗರಿಗೆ ಮಾಹಿತಿ ನೀಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಪರವಾಗಿ ಸಂಘಟನೆಯ ವಕ್ತಾರ ಕೆ.ಕೆ. ವಿಶ್ವನಾಥ್ ಮನವಿ ಮಾಡಿದ್ದಾರೆ.