*ಗೋಣಿಕೊಪ್ಪಲು, ಮಾ. 17: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ತಾ. 31 ರಂದು ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮೈಕಲ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪ ಪಟ್ಟಣದ ಬೈಪಾಸ್ ರಸ್ತೆಯ ಖಾಸಗಿ ಸ್ಥಳದಲ್ಲಿ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಕಬಡ್ಡಿ ಸ್ಪರ್ದೆಗೆ ಚಾಲನೆ ನೀಡಲಾಗುವದು ಎಂದು ತಿಳಿಸಿದ್ದಾರೆ. ಆಸಕ್ತ ತಂಡಗಳು ತಾ. 25 ರೊಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.

ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸತಕ್ಕದ್ದು, ಮಾದಕ ವಸ್ತು ಸೇವನೆ ಮಾಡಿ ಆಟವಾಡುವಂತಿಲ್ಲ ಎಂದು ಹೇಳಿದರು. ಕಾರ್ಯದರ್ಶಿ ಪಿ.ಜೆ. ಶರತ್ ಮಾತನಾಡಿ, ಮ್ಯಾಟ್ ಕಬಡ್ಡಿ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ನಗದು ಹಾಗೂ ಬಹುಮಾನಗಳನ್ನು ನೀಡಲಾಗುವದು. ಮೊದಲನೇ ಬಹುಮಾನವಾಗಿ ರೂ. 25 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ ರೂ. 15 ಸಾವಿರ ನಗದು ಮತ್ತು ಟ್ರೋಫಿ ಅಲ್ಲದೆ ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. 5 ಸಾವಿರ ಹಾಗೂ ಟ್ರೋಫಿ, ಚತುರ್ಥ ಬಹುಮಾನವಾಗಿ ಮೂರು ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ ನೀಡಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಸಿರ್, ಸಹ ಕಾರ್ಯದರ್ಶಿ ರವಿ ಹಾಗೂ ಜೋಸೆಫ್, ರವೀಂದ್ರ ಉಪಸ್ಥಿತರಿದ್ದರು.