ಸುಂಟಿಕೊಪ್ಪ, ಮಾ. 17: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂತ್ರಸ್ತ ಕುಟುಂಬದ ಮಕ್ಕಳು ಸೇರಿದಂತೆ ಶಾಲೆಯ ಎಲ್ಲಾ ಮಕ್ಕಳಿಗೂ ಬೆಂಗಳೂರಿನ ರೀಚಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಲೇಖನ ಸಾಮಗ್ರಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಳಗೊಂಡ ಎಜುಕೇಶನ್ ಕಿಟ್ ವಿತರಿಸಲಾಯಿತು. ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ಜ್ಯಾಮಿಟ್ರಿ ಬಾಕ್ಸ್, ಸ್ಟೀಲ್ ವಾಟರ್ ಬಾಟಲ್, ಟಿಫಿನ್ ಬಾಕ್ಸ್ ಹಾಗೂ ಕೊಡೆ ವಿತರಿಸಲಾಯಿತು.
ಸಾಮಗ್ರಿ ವಿತರಿಸಿ ಮಾತನಾಡಿದ ರೀಚಿಂಗ್ ಹ್ಯಾಂಡ್ ಸಂಸ್ಥೆಯ ಮೇಲ್ವಿಚಾರಕ ಎಲೀಸ್, ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮ ನೆರೆ ಸಂತ್ರಸ್ತರಿಗೆ ಸಂಸ್ಥೆ ವತಿಯಿಂದ ವಿವಿಧ ರೀತಿಯಲ್ಲಿ ನೆರವು ನೀಡಲಾಗಿದೆ.
ನೆರೆ ಹಾವಳಿ ಉಂಟಾದ ವ್ಯಾಪ್ತಿಯ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಂಸ್ಥೆ ವತಿಯಿಂದ ವಿವಿಧ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ ಎಂದರು.
ಸಂಸ್ಥೆಯ ಪ್ರತಿನಿಧಿ ಉಮೇಶ್ ಮಾತನಾಡಿ, ಮಕ್ಕಳು ಸಮಾಜದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯ ನೆರೆ ಸಂತ್ರಸ್ತ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ರೀಚಿಂಗ್ ಹ್ಯಾಂಡ್ ಸಂಸ್ಥೆಯು ನೀಡುತ್ತಿರುವ ಸೇವಾಕಾರ್ಯ ಶ್ಲಾಘನೀಯವಾದುದು ಎಂದರು. ಮುಖ್ಯ ಶಿಕ್ಷಕ ಬಾಲಕೃಷ್ಣ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿದರು.