ಮಡಿಕೇರಿ, ಮಾ. 17: ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ಸಾಕಷ್ಟು ಮೂಢ ನಂಬಿಕೆಯಿದ್ದು, ಹೆಚ್‍ಐವಿ ಪೀಡಿತರನ್ನು ಸಮಾಜದಲ್ಲಿ ಅಸ್ಪøಶ್ಯರಾಗಿ ಪರಿಗಣಿಸುತ್ತಿರುವದು ವಿಷಾದನೀಯ ಎಂದು ಜಿಲ್ಲಾ ಏಡ್ಸ್ ಮತ್ತು ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಎ.ಸಿ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಈ ಕುರಿತು ಜನಸಾಮಾನ್ಯರಲ್ಲಿ ಅರಿವಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಸಮಾರೋಪ ಭಾಷಣ ಮಾಡಿದ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕರುಂಬಯ್ಯ, ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ದಾನಿಗಳು ನೀಡಿದ ರಕ್ತವನ್ನು ರಕ್ತನಿಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಜನರಲ್ಲಿದ್ದು, ಆ ರೀತಿಯ ಯಾವದೇ ವ್ಯಾಪಾರೀ ಪ್ರವೃತ್ತಿ ರಕ್ತನಿಧಿ ಕೇಂದ್ರಗಳಲ್ಲಿರುವದಿಲ್ಲ ಎಂದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ, ರಾಷ್ಟ್ರೀಯ ಯುವ ದಿನಾಚರಣೆಯ ಕುರಿತು ಮಾತನಾಡಿದರು. ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ. ಪಿ.ಎ. ಗೀತಾಂಜಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್‍ಎಸ್‍ಎಸ್ ವಿದ್ಯಾರ್ಥಿ ಕೆ.ಪಿ. ಪುಣ್ಯ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ವಂದಿಸಿದರು. ಸಹ ಯೋಜನಾಧಿಕಾರಿ ಸಚಿನ್ ಎನ್.ಟಿ. ಮತ್ತು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.