ಮಡಿಕೇರಿ, ಮಾ. 17: ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 565/12ರ 2018ರ ಮೇ 11 ರಂದು ಮಕ್ಕಳಿಗೆ ಸಂಬಂಧಿಸಿದ ಆದೇಶವನ್ನು ಹೊರಡಿಸಿದ್ದು, ಅದರಂತೆ ಯಾವದೇ ವ್ಯಕ್ತಿ ಮುದ್ರಣ ಅಥವಾ ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕೌಟುಂಬಿಕ ವಿವರಗಳು, ಶಾಲೆ, ನೆರೆಹೊರೆ ಅಥವಾ ಮಗುವಿನ ಗುರುತನ್ನು ಬಹಿರಂಗ ಪಡಿಸಬಹುದಾದಂತ ಯಾವದೇ ಇತರ ವಿವರಗಳನ್ನೊಳಗೊಂಡ ಯಾವ ವರದಿಗಳನ್ನು ಬಹಿರಂಗ ಪಡಿಸತಕ್ಕದ್ದಲ್ಲ. ಇದು ಮಗುವಿನ ಗುರುತನ್ನು ಸಾರ್ವಜನಿಕರಿಗೆ ತಿಳಿಯುವಂತೆ ಮಾಡುತ್ತದೆ.

ಸಂತ್ರಸ್ತ ಮಗು ಮರಣ ಹೊಂದಿದ್ದರೂ ಮತ್ತು ಮಾನಸಿಕವಾಗಿ ಅಸ್ವಸ್ಥವಾಗಿದ್ದರೂ ಅಂತಹ ಮಗುವಿನ ಮೇಲೆ ಅತ್ಯಾಚಾರ ಆಗಿದ್ದಲ್ಲಿ ಅಂತಹ ಮಕ್ಕಳ ಗುರುತನ್ನು ಬಹಿರಂಗಪಡಿಸಲು ಅವರ ಸಂಬಂಧಿಗಳು ಅಧಿಕಾರ ನೀಡಿದರೂ ಕೂಡ ಬಹಿರಂಗಪಡಿಸುವಂತಿಲ್ಲ.

ಗುರುತನ್ನು ಬಹಿರಂಗಪಡಿಸುವಿಕೆಯನ್ನು ಸಮರ್ಥಿಸುವ ಸಂದರ್ಭಗಳಿದ್ದಲ್ಲಿ ಅದನ್ನು ಅರ್ಹ ಅಧಿಕಾರಿಯಿಂದ ನಿರ್ಧರಿಸುವದು, ಪ್ರಸ್ತುತ ಅಂತಹ ಅಧಿಕಾರ ಸೆಷನ್ಸ್ ನ್ಯಾಯಾಧೀಶರಿಗೆ ಇದೆ.

ಒಂದು ವೇಳೆ ‘ಫೋಕ್ಸೋ’ ಅಡಿಯಲ್ಲಿರುವ ಅಪ್ರಾಪ್ತ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಬೇಕಾದಲ್ಲಿ, ಅದು ಮಗುವಿನ ಹಿತಾಸಕ್ತಿಗೆ ಅನುಗುಣವಾಗಿದ್ದಲ್ಲಿ, ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಬಹಿರಂಗಪಡಿಸುವದು.

ಒಂದು ವೇಳೆ ಈ ಯಾವದೇ ಅಂಶವನ್ನು ಕಡೆಗಣಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮಡಿಕೇರಿ ಜಿಲ್ಲಾ ಮಕ್ಳಳ ರಕ್ಷಣಾ ಘಟಕ, ದೂರವಾಣಿ ಸಂಖ್ಯೆ 08272-228800 ಹಾಗೂ ಮಡಿಕೇರಿ ಮಕ್ಕಳ ಕಲ್ಯಾಣ ಸಮಿತಿ 08272-224220, 08272-228220 ನ್ನು ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ತಿಳಿಸಿದ್ದಾರೆ.