ಸುಂಟಿಕೊಪ್ಪ, ಮಾ. 17: ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಪರಿಸರದ ಬಗ್ಗೆ ಅಪಾರ ಕಾಳಜಿ. ಮರ ಗಿಡಗಳಿಂದಲೇ ಮನುಕುಲ, ಪ್ರಾಣಿ, ಪಕ್ಷಿ ಸಂಕುಲಗಳು ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ನಂಬಿರುವ ಮಾದಾಪುರದ ಯು. ಅಣ್ಣು ಎಂಬವರು ತನ್ನ ಸ್ವಂತ ಖರ್ಚಿನಿಂದ ಗಿಡಗಳನ್ನು ತಂದು ಶಾಲೆ, ದೇವಾಲಯ, ಸರಕಾರಿ ಆಸ್ಪತ್ರೆಯ ಆವರಣದಲ್ಲಿ ‘ನೆಟ್ಟು’ ಪರಿಸರ ಕಾಳಜಿಯ ನಿಸ್ವಾರ್ಥ ಸೇವೆಗೆ ಮುನ್ನುಡಿ ಇಟ್ಟಿದ್ದಾರೆ.
ಅಣ್ಣು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ 1 ಅವಧಿಗೆ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮರಗಿಡಗಳೊಂದಿಗೆ ಅವಿನಾಭಾವ ಪ್ರೇಮವಿರಿಸಿಕೊಂಡಿದ್ದ ಅವರು ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ಧಿಬುದ್ದಿ ಗಣೇಶ ದೇವಾಲಯದ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯ ರಸ್ತೆ ಬದಿಯಲ್ಲಿ ಗಿಡ ತಂದು ನೆಟ್ಟು ಪರಿಸರ ಉಳಿದರೆ ಮನಕುಲ ಉಳಿಯುತ್ತದೆ ಎಂದು ದೃಢವಾಗಿ ನಂಬಿಕೆ ಇಟ್ಟಿದ್ದಾರೆ.
ತೆಂಗು, ಕಿತ್ತಳೆ, ಹಣ್ಣಿನ ಗಿಡ, ಚೆರಿ ನೆರಳುಕೊಡುವ ಗಿಡವನ್ನು ಶಾಲೆ, ದೇವಾಲಯ ಆಸ್ಪತ್ರೆಯ ಆವರಣದಲ್ಲಿ ನೆಟ್ಟು ಇತರರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಮರ ಗಿಡಗಳು ಕೊಡಗಿನಲ್ಲಿ ಈ ಹಿಂದೆ ಇದ್ದಂತೆ ಈಗಿಲ್ಲ. ನಾನಾ ಕಾರಣಗಳಿಂದ ಮರಗಳು ಹಣ್ಣು ಹಂಪಲು ಗಿಡ ಮಣ್ಣಿನ ಫಲವತ್ತತೆಯ ಕೊರತೆಯಿಂದ ಅಷ್ಟಾಗಿ ಬರುತ್ತಿಲ್ಲ ಆದರೂ ಆದಷ್ಟು ತೆಂಗು, ನೆರಳಿನ ಗಿಡ ಹಣ್ಣಿನ ಗಿಡವನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
-ಜಿ.ಕೆ.