ಕುಶಾಲನಗರ, ಮಾ. 17: ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷೀಣಿಸುವದರೊಂದಿಗೆ ಗ್ರಾಮ, ಪಟ್ಟಣಗಳ ಜನತೆ ಕುಡಿವ ನೀರಿನ ಬವಣೆಗೆ ಒಳಗಾಗುವ ಸ್ಥಿತಿ ಎದುರಾಗುವ ಲಕ್ಷಣ ಕಂಡುಬರುತ್ತಿದೆ. ಕುಶಾಲನಗರ ಮೂಲಕ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬತ್ತಿ ಹೋಗುತ್ತಿರುವ ದೃಶ್ಯ ಗೋಚರಿಸುತ್ತಿದ್ದು, ನದಿ ನೀರು ಕಲುಷಿತಗೊಂಡು ಹರಿಯುತ್ತಿರುವದು ಕಾಣಬಹುದಾಗಿದೆ.

ಕಾವೇರಿ ಜಲಾನಯನ ನದಿ ತಟಗಳಲ್ಲಿ ಹೆಚ್ಚಿನ ಅಶ್ವ ಶಕ್ತಿಯ ಪಂಪ್‍ಗಳನ್ನು ಬಳಸುವ ಮೂಲಕ ಕೃಷಿ ಮತ್ತು ಅನ್ಯ ಚಟುವಟಿಕೆಗಳಿಗೆ ಭಾರೀ ಪ್ರಮಾಣದ ನೀರು ಹಾಯಿಸುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನುವದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಭಾಗಮಂಡಲ ವ್ಯಾಪ್ತಿಯಿಂದ ನದಿ ತಟದ ಭಾಗಗಳಲ್ಲಿ ಕುಶಾಲನಗರ ತನಕ ನೂರಾರು ಪಂಪ್‍ಗಳು ಹಗಲು ರಾತ್ರಿ ಎನ್ನದೆ ನದಿಯಿಂದ ನೀರು ಹಾಯಿಸುವ ಕಾಯಕದಲ್ಲಿ ತೊಡಗಿವೆ. ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ‘ಶಕ್ತಿ’ಯೊಂದಿಗೆ

ಪ್ರತಿಕ್ರಿಯಿಸಿರುವ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ನದಿ ತಟದಲ್ಲಿ ಅಕ್ರಮವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದಿದ್ದಾರೆ.

ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗಧಾಮ, ಕಣಿವೆ ವ್ಯಾಪ್ತಿಯಲ್ಲಿ ನದಿಯಲ್ಲಿ ಬಹುತೇಕ ಬಂಡೆಗಳು ಗೋಚರಿಸುತ್ತಿದ್ದು ನೀರಿನ ಹರಿವು ಕಂಡುಬರುತ್ತಿಲ್ಲ. ಕಳೆದ ಮಾರ್ಚ್ ಅಂತ್ಯದಲ್ಲಿ ನದಿ ಪೂರ್ಣವಾಗಿ ಬತ್ತಿ ಹೋಗಿ 3 ವಾರಗಳ ಕಾಲ ನೀರಿಗಾಗಿ ಬವಣೆ ಪಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದರೊಂದಿಗೆ ಜಲಚರಗಳು ಕೂಡ ಸಂಪೂರ್ಣ ನಾಶಗೊಂಡಿದ್ದವು. ಕಾವೇರಿ ನಿಸರ್ಗಧಾಮ ಸಮೀಪದ ನದಿ ವ್ಯಾಪ್ತಿಯಿಂದ ಮೀನುಗಾರಿಕೆ ಇಲಾಖೆ ಮೂಲಕ ಮಹಶೀರ್ ಮೀನುಗಳನ್ನು ಹಾರಂಗಿ ಜಲಾಶಯಕ್ಕೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ಕೂಡ ನಡೆಸಲಾಗಿತ್ತು.

ಈ ಬಾರಿ ನದಿ ತುಂಬಿ ಹರಿದು ಜಲಪ್ರಳಯವಾಗಿದ್ದರೂ ಜಲಾನಯನ ಪ್ರದೇಶಗಳಲ್ಲಿ ಜಲಮೂಲಗಳು ಬತ್ತಿ ಹೋಗಿರುವ ಕಾರಣ ನದಿ ಮಾರ್ಚ್ ಆರಂಭದಲ್ಲೇ ಬರಡಾಗಿದೆ.

ನದಿ ಹರಿಯುತ್ತಿರುವ ಕೆಲವೆಡೆ ನೀರನ್ನು ಚೆಕ್ ಡ್ಯಾಂ ನಿರ್ಮಾಣ ಮಾಡಿ ಸಂಗ್ರಹಿಸುವ ಮೂಲಕ ಅಂತರ್ಜಲ ಹೆಚ್ಚಿಸುವದರೊಂದಿಗೆ ಅವಶ್ಯಕತೆಗೆ ನೀರಿನ ಬಳಕೆ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕಾಗಿದೆ ಎಂದು ಕುಶಾಲನಗರ ಹಿರಿಯ ನಾಗರಿಕ ನಂಜುಂಡಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಅಂದಾಜು 30 ಸಾವಿರಕ್ಕೂ ಅಧಿಕ ನಾಗರಿಕರಿಗೆ ಕುಡಿಯುವ ನೀರು ಒದಗಿಸುತ್ತಿರುವ ಕಾರ್ಯ ನಡೆಸುತ್ತಿರುವ ಕರ್ನಾಟಕ ರಾಜ್ಯ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರತಿವರ್ಷ ಏಪ್ರಿಲ್ ಪ್ರಾರಂಭದಲ್ಲಿ ನೀರಿನ ಕೊರತೆ ಕಂಡುಬಂದ ಸಂದರ್ಭ ನೀರಿನ ಸಂಗ್ರಹಕ್ಕಾಗಿ ಮರಳಿನ ಬಂಡ್ ನಿರ್ಮಿಸುತ್ತಿರುವದು ಸಾಮಾನ್ಯವಾಗಿದೆ. ಈ ತಾತ್ಕಾಲಿಕ ವ್ಯವಸ್ಥೆಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕದ ಹಿನ್ನೆಲೆ ಈ ಬಾರಿ ಪಟ್ಟಣ ಪಂಚಾಯಿತಿ ಮೂಲಕ ನದಿ ನೀರು ಸಂಗ್ರಹಕ್ಕಾಗಿ ಯೋಜನೆ ಯೊಂದನ್ನು ರೂಪಿಸಲಾಗಿದೆ ಎಂದು ಮಂಡಳಿಯ ಸಹಾಯಕ ಅಭಿಯಂತರ ಆನಂದ್ ತಿಳಿಸಿದ್ದಾರೆ. ಇದಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ. ಬೈಚನಹಳ್ಳಿ ಪಂಪ್‍ಹೌಸ್ ಬಳಿ 2.5 ಮೀಟರ್ ಎತ್ತರಕ್ಕೆ ತಾತ್ಕಾಲಿಕ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ನೀರಿನ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದರಿಂದ ನದಿಯ ಮೇಲ್ಭಾಗದಲ್ಲಿ 1 ಕಿ.ಮೀ. ಉದ್ದ ವ್ಯಾಪ್ತಿ ವರೆಗೂ ನೀರಿನ ಸಂಗ್ರಹವಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಪ್ರತಿ ನಾಗರಿಕರಿಗೆ ದಿನವೊಂದಕ್ಕೆ 135 ಲೀಟರ್ ಪ್ರಮಾಣದ ನೀರಿನ ಅವಶ್ಯಕತೆಯಿದ್ದು, ಕುಶಾಲನಗರದಲ್ಲಿ ಈಗಿರುವ ಯೋಜನೆಯ ಪ್ರಕಾರ ವ್ಯಕ್ತಿಯೊಬ್ಬರಿಗೆ ತಲಾ 100 ಲೀಟರ್ ನೀರು ಒದಗಿಸುವ ಸಾಮಥ್ರ್ಯ ಇರುವದಾಗಿ ಮಾಹಿತಿ ನೀಡಿದ್ದಾರೆ.

ಬೇಸಿಗೆ ಅವಧಿಯಲ್ಲಿ ನದಿ ನೀರಿನ ಕೊರತೆ ಎದುರಾಗುವದ ರೊಂದಿಗೆ ಪರ್ಯಾಯವಾಗಿ ಹಾರಂಗಿ ಜಲಾಶಯದಿಂದ ಕುಶಾಲನಗರ ಪಟ್ಟಣಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ರೂ. 87 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆಯೊಂದಕ್ಕೆ ಸರಕಾರ ಅನುಮೋದನೆ ನೀಡಿದೆ ಎಂದು ಆನಂದ್ ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಪೂರೈಕೆ ಏರುಪೇರಾಗುವ ಹಿನ್ನೆಲೆ ಬಡಾವಣೆಗಳಿಗಿರುವ ಕಿರು ನೀರಾವರಿ ಯೋಜನೆಯ ಕೊಳವೆ ಬಾವಿಗಳನ್ನು ದುರಸ್ತ್ತಿ ಮಾಡಿ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದ್ದಾರೆ. ನೀರಿನ ಅಪವ್ಯಯ ಮಾಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕೆಂದು ಅವರು ‘ಶಕ್ತಿ’ ಮೂಲಕ ಕೋರಿದ್ದಾರೆ.

- ಚಂದ್ರಮೋಹನ್

x