ಕೂಡಿಗೆ, ಮಾ. 16: ಹಾರಂಗಿ ಅಣೆಕಟ್ಟೆಯಲ್ಲಿ ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ಆದ ಪ್ರಕೃತಿ ವಿಕೋಪದ ಸಂದರ್ಭ ಅತ್ಯಧಿಕ ಹೂಳು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ 8 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯವಿದ್ದು, ಹೂಳು ತುಂಬಿರುವದರಿಂದ ಈ ಸಾಲಿನಲ್ಲಿ ಹೂಳು ತೆಗೆಯದಿದ್ದರೇ 3 ಟಿಎಂಸಿ ನೀರು ಸಂಗ್ರಹವಾಗುವದು ಕಷ್ಟ. ಅಣೆಕಟ್ಟೆಯಲ್ಲಿ ಹೂಳು ತೆಗೆಯುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದು, ಹೂಳನ್ನು ತೆಗೆಯುವ ಬಗ್ಗೆ ಸರ್ವೆ ಕಾರ್ಯ ನಡೆಸುವದಾಗಿ ರಾಜ್ಯ ಮಟ್ಟದ ತಂಡ ವೀಕ್ಷಣೆ ನಡೆಸಿ ಹೋಗಿದ್ದಾರೆ ವಿನಾಃ ಇದುವರೆಗೂ ಯಾವದೇ ರೀತಿ ಕಾರ್ಯಕ್ಕೆ ಹಣ ಬಿಡುಗಡೆಯಾಗಿಲ್ಲ. ಅಣೆಕಟ್ಟೆಯ ಹೂಳೆತ್ತಲು ಹಾರಂಗಿ ಜಲಾಶಯದ ಅಚ್ಚಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘದ ಅಧ್ಯಕ್ಷರು ಹಾಗೂ ಸಂಘದ ನಿರ್ದೇಶಕರು, ರೈತರು ಆಗ್ರಹಿಸಿದ್ದಾರೆ.
ಮುಂಗಾರು ಮಳೆ ಬೀಳಲು ಇನ್ನು ಒಂದು ತಿಂಗಳು ಇದ್ದು, ಹೂಳೆತ್ತಲು ಇದುವರೆಗೂ ಯಾವದೇ ಪ್ರಕ್ರಿಯೆ ಪ್ರಾರಂಭವಾಗದಿರುವದರಿಂದ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಸಾಮಾಥ್ರ್ಯವು ಕಡಿಮೆಯಾಗುವದು ಖಚಿತ ಎಂಬದು ರೈತರ ಅಭಿಪ್ರಾಯವಾಗಿದೆ. ಮಳೆಗಾಲದಲ್ಲಿ ಹೆಚ್ಚು ಮಳೆ ಬಂದಾಗ ನೀರು ಸಂಗ್ರಹಿಸಲು ಅಣೆಕಟ್ಟೆಯಲ್ಲಿ ಆಗದೆ, ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನದಿಗೆ ಹರಿಸುವದು ಸಾಮಾನ್ಯವಾಗುತ್ತದೆ. ಮಳೆ ಕ್ಷೀಣಗೊಂಡ ನಂತರ ರೈತರ ಬೆಳೆಗೆ ನೀರು ಸಿಗದೆ, ಮುಂಗಾರು ಬೇಸಾಯಕ್ಕೆ ನೀರಿನ ಕೊರತೆ ಕಾಡುತ್ತದೆ. ಆದ್ದರಿಂದ ಕೃಷಿಗೆ ನೀರನ್ನು ಒದಗಿಸಿ, ಬೇಸಾಯಕ್ಕೆ ಸಮರ್ಪಕವಾಗಿ ನೀರೊದಗಿಸಲು ಕಾರ್ಯೋನ್ಮುಖರಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.