ಸೋಮವಾರಪೇಟೆ, ಮಾ. 15: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕುಶಾಲನಗರದ ಎಪಿಎಂಸಿ ಸಭಾಂಗಣದಲ್ಲಿ ತಾ. 16ರಂದು (ಇಂದು) ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ನಂತರ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುವದು ಎಂದರು.

ಶನಿವಾರ ಕುಶಾಲನಗರದಲ್ಲಿ ನಡೆಯಬೇಕಿದ್ದ ಮಹಿಳಾ ದಿನಾಚರಣೆಗೆ ರಾಜಕೀಯ ಮುಖಂಡರುಗಳಿಗೆ ಆಹ್ವಾನವಿರಲಿಲ್ಲ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಾಗಿ ಆಶಾ ಅಶೋಕ್ ಮತ್ತು ಖುಷಿ ಕುಶಾಲಪ್ಪ ಅವರುಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದರು.

ಇದರೊಂದಿಗೆ "ಮತದಾನದಲ್ಲಿ ಮಹಿಳೆಯರ ಪಾತ್ರ" ವಿಷಯದ ಕುರಿತು ವಿಚಾರ ಮಂಡನೆ ಏರ್ಪಡಿಸಲಾಗಿತ್ತು. ನೀತಿ ಸಂಹಿತೆಯ ಕಾರಣದಿಂದ ಏಕಾಏಕಿ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ತಹಸೀಲ್ದಾರ್ ಸೂಚನೆ ನೀಡಿರುವದರಿಂದ, ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಸಂಘದ ಏಳಿಗೆ, ಕಾರ್ಯಕ್ರಮಗಳನ್ನು ಸಹಿಸದ ಕೆಲ ಅತೃಪ್ತ ಆತ್ಮಗಳು ಕಾರ್ಯಕ್ರಮವನ್ನು ಮುಂದೂಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ನೀತಿ ಸಂಹಿತೆಯ ಕಾನೂನು ವ್ಯಾಪ್ತಿಯೊಳಗೆ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದರೂ ಸಹ ಕೆಲವರು ಮಹಿಳಾ ದಿನಾಚರಣೆಯನ್ನು ಸಹಿಸದೇ ಇಂತಹ ಕೃತ್ಯ ಎಸಗಿದ್ದಾರೆ ಎಂದು ದೂರಿದರು.

ಕಾರ್ಯಕ್ರಮಕ್ಕೆ ಯಾವದೇ ರಾಜಕೀಯ ಮುಖಂಡರಿಗೆ ಆಹ್ವಾನ ನೀಡಿರಲಿಲ್ಲ. ರಾಜಕೀಯದ ಹಸ್ತಕ್ಷೇಪವೂ ಇರಲಿಲ್ಲ. ಆದರೂ ಒಂದು ಪಕ್ಷಕ್ಕೆ ಉಪಯೋಗ ಮಾಡಿಕೊಡಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕೆಲ ಸದಸ್ಯರು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ, ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಸಿ.ಕೆ.ಶಿವಕುಮಾರ್, ಕಾರ್ಯದರ್ಶಿ ಬಸವರಾಜು, ಸಂಘಟನಾ ಕಾರ್ಯದರ್ಶಿ ರಾಜಪ್ಪ ಉಪಸ್ಥಿತರಿದ್ದರು.