ಸೋಮವಾರಪೇಟೆ, ಮಾ. 15: ಸರ್ಕಾರದ ಬಸವ ವಸತಿ ಯೋಜನೆ ಯಡಿ ಮನೆ ನೀಡಲು ಫಲಾನುಭವಿ ಯಿಂದ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಗ್ರಾ.ಪಂ. ಸದಸ್ಯತ್ವ ಮತ್ತು ಅಲಂಕರಿಸಿದ್ದ ಸ್ಥಾನದಿಂದ ತೆಗೆದು ಹಾಕಿ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ತಾ. 06.07.2018ರಂದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ನಿರ್ಮಲ ಸುಂದರ್ ಮತ್ತು ಉಪಾಧ್ಯಕ್ಷ ಬಿ.ಎ.ಅಹಮ್ಮದ್ ಅವರುಗಳನ್ನು ಲಂಚ ಸ್ವೀಕರಿಸಿದ ಪ್ರಕರಣದಡಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು. ಫಲಾನುಭವಿಯಾಗಿದ್ದ ಹೆಚ್.ಎಂ. ಚಂದ್ರಶೇಖರ್ ಅವರಿಂದ ಲಂಚದ ಹಣವಾಗಿ ರೂ. 5ಸಾವಿರ ಪಡೆಯು ವಾಗ ಎ.ಸಿ.ಬಿ. ಧಾಳಿ ನಡೆದಿತ್ತು. ಈ ಸಂದರ್ಭ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ನಂತರದ ವಿಚಾರಣೆಯಲ್ಲಿ ಆರೋಪಿ ಗಳ ಹೇಳಿಕೆಯನ್ನೂ ಪಡೆಯಲಾಗಿತ್ತು.
ಇದರೊಂದಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಂದಲೂ ವರದಿ ಪಡೆದು ವಿಚಾರಣೆ ನಡೆಸಲಾಗಿದ್ದು, ಅಂತಿಮವಾಗಿ ಈರ್ವರನ್ನು ಸದಸ್ಯತ್ವ ಮತ್ತು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ 43 ಮತ್ತು 48ರನ್ವಯ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯ ದರ್ಶಿಗಳೂ ಆಗಿರುವ ಮುಬಾರಕ್ ಅಹಮದ್ ಅವರು ಈ ಆದೇಶ ಹೊರಡಿಸಿದ್ದಾರೆ.