ಶನಿವಾರಸಂತೆ, ಮಾ. 16: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಕಟ್ಟವೊಂದರ ಮೇಲಂತಸ್ತಿನಲ್ಲಿ ಕೊಯಮತ್ತೂರಿನವಳೆಂದು ಹೇಳಿಕೊಳ್ಳುವ ಉಮಾಮಹೇಶ್ವರಿ ಎಂಬಾಕೆ ಸರ್ವ ರೋಗವನ್ನು ನಾಡಿ ಚಿಕಿತ್ಸೆಯಿಂದ ಗುಣಪಡಿಸುವದಾಗಿ ಹೇಳಿ 10 ಸೆಕೆಂಡಿಗೆ ರೂ. 300 ಶುಲ್ಕ ಪಡೆದು ಜನತೆಯನ್ನು ವಂಚಿಸುತ್ತಿದ್ದಾರೆ ಎಂದು ನಾಗರಿಕ ಆರ್.ಪಿ. ಮೋಹನ್ ತಾಲೂಕು ವೈದ್ಯಾಧಿಕಾರಿ ಎಂ.ಯು. ಚೇತನ್ ಅವರಿಗೆ ದೂರು ನೀಡಿದ್ದಾರೆ.

ವೈದ್ಯೆ ಉಮಾಮಹೇಶ್ವರಿ ತಿಂಗಳ 3ನೇ ಶನಿವಾರ ಶನಿವಾರಸಂತೆಗೆ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ನಾಡಿ ಹಿಡಿದು 10 ಸೆಕೆಂಡ್ ಪರೀಕ್ಷಿಸುತ್ತಾರೆ. ಪ್ರತಿ ಬಾರಿ 50-60 ಜನರು ವೈದ್ಯೆಯನ್ನು ಭೇಟಿಯಾಗುತ್ತಾರೆ ಎಂದು ಮೋಹನ್ ದೂರಿನಲ್ಲಿ ತಿಳಿಸಿದ್ದರು.

ದೂರಿಗೆ ಸ್ಪಂದಿಸಿದ ವೈದ್ಯಾಧಿಕಾರಿ ಚೇತನ್ ಶನಿವಾರ ಸ್ಥಳಕ್ಕೆ ಆಗಮಿಸಿ ರೋಗಿಗಳಿಂದ ತುಂಬಿದ್ದ ಕೊಠಡಿಗೆ ಭೇಟಿ ನೀಡಿ ಉಮಾಮಹೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪರಿಶೀಲಿಸಿದಾಗ ಯಾವದೇ ದಾಖಲಾತಿಗಳು ದೊರೆಯಲಿಲ್ಲ. ಸಲಕರಣೆಗಳಾಗಲೀ, ರೋಗಿಗಳು ಕೂರಲು ಆಸನ ವ್ಯವಸ್ಥೆ ಅಲ್ಲಿರಲಿಲ್ಲ.

ಜಿಲ್ಲಾ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಪಡೆದು ಕೊಠಡಿಗೆ ಫಲಕ ಅಳವಡಿಸಿ, ಸೌಲಭ್ಯ ವ್ಯವಸ್ಥೆ ಮಾಡುವಂತೆ ಸೂಚಿಸಿದ ವೈದ್ಯಾಧಿಕಾರಿ ಚೇತನ್ ಅಲ್ಲಿದ್ದ ರೋಗಿಗಳಿಗೆ ಮೋಸ ಹೋಗದಂತೆ ಎಚ್ಚರಿಸಿದರು.