ಗೋಣಿಕೊಪ್ಪ ವರದಿ, ಮಾ. 15: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಮೇ 5 ರಂದು ಬೇಗೂರು ಕೊಲ್ಲಿಯ ಗದ್ದೆಯಲ್ಲಿ ರಾಷ್ಟ್ರಮಟ್ಟದ ದ್ವಿಚಕ್ರ ಹಾಗೂ ನಾಲ್ಕುಚಕ್ರ ಟ್ರ್ಯಾಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸೋಮಯ್ಯ ತಿಳಿಸಿದ್ದಾರೆ.

11 ನೇ ವರ್ಷದ ಈ ಟ್ರ್ಯಾಕ್ ರ್ಯಾಲಿಯಲ್ಲಿ ದ್ವಿಚಕ್ರ ಹಾಗೂ ನಾಲ್ಕುಚಕ್ರ ವಿಭಾಗದಲ್ಲಿ ಸುಮಾರು 13 ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇಗೂರು ಕೊಲ್ಲಿಯ ತೀತಿರ, ಇಟ್ಟೀರ, ಐಪುಮಾಡ, ಚೆಕ್ಕೇರ ಹಾಗೂ ಚೇಂದಿರ ಕುಟುಂಬಸ್ಥರ ಗದ್ದೆಯಲ್ಲಿ ರ್ಯಾಲಿ ಆಯೋಜಿಸಲಾಗುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧಿಗಳು ಹೆಚ್ಚಾಗಿ ಪಾಲ್ಗೊಳ್ಳುವದರಿಂದ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ದ್ವಿಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, ನಾವಿಸ್ ಕ್ಲಾಸ್, 2 ಸ್ಟ್ರೋಕ್, ಫೋರ್ ಸ್ಟ್ರೋಕ್, ಇಂಡಿಯನ್ ಓಪನ್, ಎಕ್ಸ್‍ಪರ್ಟ್ ಕ್ಲಾಸ್ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ. ನಾಲ್ಕುಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 800 ಸಿ.ಸಿ, 1000-1400 ಸಿ.ಸಿ, 1400-1600 ಸಿಸಿ, ಇಂಡಿಯನ್ ಓಪನ್, ಡೀಸಲ್ ಕ್ಲಾಸ್, ಸ್ಪರ್ಧೆ ನಡೆಯಲಿದೆ. ಮಹಿಳಾ ತಂಡಗಳು ಹೆಸರು ನೋಂದಾಯಿಸಿಕೊಂಡಲ್ಲಿ ಅವರಿಗೂ ಕೂಡ ಸ್ಪರ್ಧೆಗಳನ್ನು ಆಯೋಜಿಸಲಾಗವದು ಎಂದು ತಿಳಿಸಿದರು.

ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ರ್ಯಾಲಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ದೊರೆತಂತಾಗಲಿದೆ. ಕೊಡಗಿನಲ್ಲಿ ಕೂಡ ಸಾಕಷ್ಟು ರ್ಯಾಲಿ ಪಟುಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವದರಿಂದ ರ್ಯಾಲಿಗೆ ಮತ್ತೆ ಚಾಲನೆ ನೀಡಲಾಗುತ್ತಿದೆ. ದಕ್ಷಿಣ ಕೊಡಗಿನಲ್ಲಿ ಬೇಸಿಗೆ ಸಂದರ್ಭ ರ್ಯಾಲಿ ಪ್ರಿಯರಿಗೆ ರೋಚಕ ಅನುಭವವನ್ನು ನೀಡಲಾಗುವದು. ಲೋಕಸಭೆ ಚುನಾವಣೆ ರ್ಯಾಲಿ ದಿನಾಂಕದಲ್ಲಿ ನಡೆಯುವ ಸಾಧ್ಯತೆ ಇದ್ದರೆ ದಿನಾಂಕ ಮುಂದೂಡ ಲಾಗುವದು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9480085060, 9480426149 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಜೆಸಿಐ ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಮಾಜಿ ಅಧ್ಯಕ್ಷ ಕೊಟ್ಟಂಗಡ ರಾಜ ಸುಬ್ಬಯ್ಯ, ಜೆಸಿಐ ವಲಯ ನಿಕಟಪೂರ್ವ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಉಪಸ್ಥಿತರಿದ್ದರು.