ಪೆರಾಜೆ, ಮಾ. 15: ಪೆರಾಜೆ ಕುಂಡಾಡು ಮತ್ತು ಬಂಗಾರಕೋಡಿ ಮಧ್ಯ ಪ್ರದೇಶದ ವಜ್ರಪುರದಲ್ಲಿ ನಡೆಯುತ್ತಿದ್ದ ವಜ್ರದ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಥಳಕ್ಕೆ ಭೇಟಿ ನೀಡಿದರೂ, ಜಿಲ್ಲಾಧಿಕಾರಿಗಳಿಗೆ ವರದಿಸಲ್ಲಿಕೆಯಾಗದೆ, ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಮೂರು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈ ವೇಳೆ ಸ್ಥಳೀಯವಾಗಿ ದೂರು ನೀಡಿದ್ದರೂ ಕಂದಾಯ ಇಲಾಖೆ ಕ್ರಮಕೈಗೊಳ್ಳದೆ ಇದ್ದು, ನೇರವಾಗಿ ಶಾಮಿಲು ಆಗಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೇಲೂ ಸ್ಥಳೀಯವಾಗಿ ಅನುಮಾನ ವ್ಯಕ್ತವಾಗಿದ್ದು, ಪತ್ರಿಕೆಯಲ್ಲಿ ವರದಿ ಪ್ರಕಟವಾದ ಕೂಡಲೇ ಜಿಲ್ಲಾಧಿಕಾರಿ ಆದೇಶ ಮೇರೆಗೆ ಸ್ಥಳಕ್ಕೆ ಇಲಾಖೆಯವರು ಗುರುವಾರ ಭೇಟಿ ನೀಡಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ನೇರವಾಗಿ ಗಣಿಗಾರಿಕೆ ಆಗುವ ಸ್ಥಳ ಪರಿಚಯ ವಿರುವಂತೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ, ಶುಕ್ರವಾರ ಸಂಜೆ ವರೆಗೂ ಗಣಿಗಾರಿಕೆ ಬಗ್ಗೆ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯೂ ಶಾಮೀಲು ಆಗಿದೆ ಎನ್ನುವ ಆರೋಪ ಗ್ರಾಮದಲ್ಲಿ ಕೇಳಿಬರುತ್ತಿದೆ.

ಕ್ರೈಂ ಪೊಲೀಸರ ಭೇಟಿ: ಸ್ಥಳಕ್ಕೆ ಕ್ರೈಂ ಪೊಲೀಸ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ಬಗ್ಗೆ ನಿರ್ಲಕ್ಷಿಸಿದರೆ ಮುಂದಿನ ಮಳೆಗಾಲದ ವೇಳೆ ಗಣಿಗಾರಿಕೆ ಮತ್ತೆ ಆರಂಭವಾಗಿ ಕಳೆದ ಸಾಲಿನ ಪ್ರಕೃತಿ ದುರಂತದಂತೆ ಪೆರಾಜೆಯ ವಜ್ರಪುರವೂ ಬಲಿಯಾಗಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.