ಮಡಿಕೇರಿ, ಮಾ. 15: ಭಾರತೀಯ ಸೇನಾ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟತೆಯೊಂದಿಗೆ ಪ್ರಖ್ಯಾತವಾಗಿರುವ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗಿನ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಸೇನೆಯ ಮೂರು ವಿಭಾಗಗಳಲ್ಲಿ ವಿವಿಧ ಅತ್ಯುನ್ನತ ಹುದ್ದೆಗಳನ್ನು ಕೊಡಗಿನ ಅಧಿಕಾರಿಗಳು ನಿರ್ವಹಿಸಿರುವದು, ಈಗಲೂ ಇದೇ ಸೇವೆ ಮುಂದುವರಿಯುತ್ತಿರುವದು ವಿಶೇಷವಾಗಿದೆ. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಪ್ರಾರಂಭಗೊಂಡಿರುವ ಸೇನಾ ಪರಂಪರೆ ಗಮನ ಸೆಳೆಯುತ್ತದೆ.ಇವರ ಬಳಿಕ ಭೂಸೇನೆಯಲ್ಲಿನ ಅತ್ಯುನ್ನತ ಹುದ್ದೆಯಾದ ಜನರಲ್ ಹುದ್ದೆಗೆ ಯಾರೂ ನೇಮಕವಾಗದಿದ್ದರೂ ನಂತರದ ಹುದ್ದೆಯಾದ ಲೆಫ್ಟಿನೆಂಟ್ ಜನರಲ್ ಹುದ್ದೆಯನ್ನು ಈ ತನಕ ಕೊಡಗಿನ ಏಳು ಮಂದಿ ಅಲಂಕರಿಸಿದ್ದಾರೆ. ಇದೀಗ ಇವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಗೊಳ್ಳುತ್ತಿದ್ದಾರೆ. ಈ ತನಕ ಮೇಜರ್ ಜನರಲ್ ಹುದ್ದೆಯಲ್ಲಿ ಮಿಲಿಟರಿ ಸೆಕರೆಟರಿ ಫಾರ್ ಪ್ರೆಸಿಡೆಂಟ್ ಆಫ್ ಇಂಡಿಯಾದಲ್ಲಿದ್ದ ಕೋದಂಡ ಪಿ. ಕಾರ್ಯಪ್ಪ ಅವರು ಪದೋನ್ನತಿ ಹೊಂದಲಿದ್ದು, ಲೆಫ್ಟಿನೆಂಟ್ ಜನರಲ್ ರ್ಯಾಂಕ್‍ನ ಅಧಿಕಾರಿಯಾಗಲಿರುವದು ಖಚಿತಪಟ್ಟಿದೆ.

ಮಾದಾಪುರದ ಕೋದಂಡ ಪೂವಯ್ಯ ಅವರ ಪುತ್ರರಾದ ಕಾರ್ಯಪ್ಪ ಅವರು ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೆ ಕೊಡಗಿನವರಾದ ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರು ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಹೊಂದಿದ್ದು, ಇವರೂ ಪ್ರಮುಖ ಜವಾಬ್ದಾರಿಯಲ್ಲಿದ್ದಾರೆ. ಇದರೊಂದಿಗೆ ಪ್ರಸ್ತುತ ಸೇನೆಯಲ್ಲಿ ಕೊಡಗಿನ ಇಬ್ಬರು ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದಂತಾಗಲಿದೆ.

ಈ ಹಿಂದೆ ಕೊಡಗಿನವರಾದ ಅಪ್ಪಾರಂಡ ಅಯ್ಯಪ್ಪ, ಕೋದಂಡ ಸೋಮಣ್ಣ, ಬಿದ್ದಂಡ ಸಿ. ನಂದಾ, ಬುಟ್ಟಿಯಂಡ ಕೆ. ಚಂಗಪ್ಪ, ಬಲ್ಲಚಂಡ ಚಂಗಪ್ಪ ಹಾಗೂ ಡಾ. ವಿ.ಎಂ. ಪ್ರಸಾದ್ ಅವರು ಈ ರ್ಯಾಂಕ್‍ನ ಅಧಿಕಾರಿಗಳಾಗಿದ್ದರು. ಪ್ರಸ್ತುತ ಪಟ್ಟಚೆರವಂಡ ತಿಮ್ಮಯ್ಯ ಹಾಗೂ ಇದೀಗ ಬಡ್ತಿ ಹೊಂದುತ್ತಿರುವ ಕೋದಂಡ ಕಾರ್ಯಪ್ಪ ಅವರು ಕರ್ತವ್ಯದಲ್ಲಿರುವ ಅಧಿಕಾರಿಗಳಾಗಲಿದ್ದಾರೆ.

ಓರ್ವರು ರಿಯರ್ ಅಡ್ಮಿರಲ್

ನೌಕಾಪಡೆಗೆ ಸಂಬಂಧಿಸಿದಂತೆ ಪ್ರಸ್ತುತ ಭೂಸೇನೆಯ ಮೇಜರ್ ಜನರಲ್ ಹುದ್ದೆಗೆ ಸರಿಸಮನಾದ ಶ್ರೇಣಿಯಾದ ರಿಯರ್ ಅಡ್ಮಿರಲ್ ಆಗಿಯೂ ಕೊಡಗಿನವರಾದ ಐಚೆಟ್ಟಿರ ಉತ್ತಯ್ಯ ಅವರು ಕರ್ತವ್ಯದಲ್ಲಿದ್ದಾರೆ. ಇನ್ನು ಭೂಸೇನೆಯಲ್ಲಿ ಈ ತನಕ 17 ಮಂದಿ ಮೇಜರ್ ಜನರಲ್‍ಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಪ್ರಸ್ತುತ ಚೆನ್ನೀರ ಬನ್ಸಿ ಪೊನ್ನಪ್ಪ ಹಾಗೂ ಕೋದಂಡ ಕಾರ್ಯಪ್ಪ ಕರ್ತವ್ಯದಲ್ಲಿದ್ದರು.