ಗೋಣಿಕೊಪ್ಪ ವರದಿ, ಮಾ. 15: ಹೊರಗಿನ ನಿರಾಶ್ರಿತರಿಗೆ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಹಕ್ಕುಪತ್ರ ನೀಡುವ ಮೂಲಕ ಸ್ಥಳೀಯ ನಿರಾಶ್ರಿತರ ಮೇಲೆ ಆಗಿರುವ ಅನ್ಯಾಯದ ವಿರುದ್ಧ ಕಾನೂನು ಕ್ರಮಕ್ಕೆ ಮೊರೆ ಹೋಗಲಾಗುವದು ಎಂದು ಹಾತೂರು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 800 ನಿರಾಶ್ರಿತರು ಕಳೆದ 10 ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅವರಿಗೆ ನಿವೇಶನ ಹಕ್ಕುಪತ್ರ ನೀಡಲಾಗುತ್ತಿಲ್ಲ. ಆದರೆ, ಜಿಲ್ಲಾಡಳಿತ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಗೆ ಇರುವವರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಹಕ್ಕುಪತ್ರ ನೀಡಿರುವದರಿಂದ ಸ್ಥಳೀಯ ನೈಜ ಪಲಾನುಭವಿಗಳಿಗೆ ವಂಚನೆಯಾಗುತ್ತಿದೆ. ಇದರ ವಿರುದ್ಧ ಕಾನೂನು ಕ್ರಮಕ್ಕೆ ಮೊರೆ ಹೋಗಲಾಗುವದು ಎಂದು ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ವ್ಯಾಪ್ತಿಯಲ್ಲಿ ಇಲ್ಲದ ರಾಜ್ಯದ ಯಾವದೋ ಮೂಲೆ ಮೂಲೆಗಳಿಂದ ನಿರಾಶ್ರಿತರು ಎಂದು ಹೇಳಿಕೊಳ್ಳುವ ಒಂದಷ್ಟು ಜನರು ನಮ್ಮ ಪಂಚಾಯಿತಿ ಆವರಣದಲ್ಲಿ ನಿವೇಶನಕ್ಕೆ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ನಮ್ಮ ಪಂಚಾಯಿತಿ ವ್ಯಾಪ್ತಿಯ ನಿರಾಶ್ರಿತರಲ್ಲದ ಕಾರಣ ನಮಗೆ ಅವರಿಗೆ ಯಾವ ಮೂಲದಿಂದಲೂ ಸೌಕರ್ಯ ನೀಡಲಾಗುತ್ತಿಲ್ಲ. ನಮ್ಮಲ್ಲಿ ಅಂತಹ ಅನುದಾನ ಕೂಡ ಇಲ್ಲ ಎಂದರು. ಸ್ಥಳೀಯವಾಗಿ ನೂರಾರು ನಿರಾಶ್ರಿತರು ನಮ್ಮ ಗ್ರಾಮದಲ್ಲಿದ್ದು, ಅವರಿಗೆ ನಿವೇಶನ ಹಕ್ಕುಪತ್ರ ನೀಡದೆ ಇರುವದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಆಧ್ಯತೆ ಮೇರೆಗೆ ಸ್ಥಳೀಯ ಫಲಾನುಭವಿಗಳಿಗೆ ನಿವೇಶನಕ್ಕೆ ಹಕ್ಕುಪತ್ರ ವಿತರಣೆಯಾಗಲಿ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ದರ್ಶನ್ ನಂಜಪ್ಪ ಮಾತನಾಡಿ, ಕುಂದ ಗ್ರಾಮದ ಸರ್ವೆ ನಂಬರ್ 92/1 ರಲ್ಲಿ ತಾಲೂಕು ಕಾರ್ಯನಿರ್ವಾಹಕ ಹೆಸರಿನಲ್ಲಿರುವ 6 ಏಕರೆ ಜಾಗದಲ್ಲಿ ಹಳ್ಳಿಗಟ್ಟು ಗ್ರಾಮದ 116 ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ನಿವೇಶನ ನೀಡಲು ಆದೇಶವಿದೆ. ಆದರೆ, ಹೊರಗಿನಿಂದ ಬಂದ ಕೆಲವರು ಈ ಜಾಗದಲ್ಲಿ ಸೇರಿಕೊಂಡು ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ನಮ್ಮ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸು ತ್ತಿರುವದು ನಿಯಮಬಾಹಿರವಾಗಿದೆ. ನಮ್ಮ ಗ್ರಾಮದವರಲ್ಲದ ನಿರಾಶ್ರಿತರು ಎಂದು ಹೇಳಿಕೊಳ್ಳುವ ನಿವಾಸಿಗಳಿಗೆ ಸರ್ಕಾರ ನೀಡಿರುವ ಹಕ್ಕುಪತ್ರದಲ್ಲಿನ ಜಾಗವನ್ನು ಹಂಚಿಕೆ ಮಾಡಲು ವೀರಾಜಪೇಟೆ ತಾಲೂಕು ಪಂಚಾಯಿತಿ ಇಒ ಅವರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಸರ್ವೆ ಇಲಾಖೆ ಜಾಗದ ಗಡಿ ಗುರುತಿಸಬೇಕಿತ್ತು. ಇಲಾಖೆ ಇಲ್ಲಿ ಯಾವ ಕ್ರಮವನ್ನು ಕೈಗೊಳ್ಳದ ಕಾರಣ ಅಲ್ಲಿ ಜಾಗ ವಿತರಣೆ ಮಾಡಲು ತೊಡಕಾಗಿದೆ. ಇದನ್ನು ಅರಿಯದೆ ಅನಾವಶ್ಯಕವಾಗಿ ತೊಂದರೆ ನೀಡಲಾಗುತ್ತಿದೆ ಎಂದರು.
ರಾಜೀವ್ ಗಾಂಧಿ ಗ್ರಾಮೀಣ ಅಭಿವೃದ್ಧಿ ಇಲಾಖೆ ವತಿಯಿಂದ ಈ ಜಾಗದಲ್ಲಿ ನಿವೇಶನ ರಚನೆ ಹಾಗೂ ಬಡಾವಣೆ ಅಭಿವೃದ್ಧಿಗೆ ರೂ. 3.48 ಲಕ್ಷ ಕೊಡಗು ಜಿಲ್ಲಾಧಿಕಾರಿ ಅವರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಬಳಸಿಕೊಳ್ಳಲಾಗುತ್ತಿಲ್ಲ. ತಾಂತ್ರಿಕವಾಗಿ ಹಾತೂರು ಗ್ರಾಮ ಪಂಚಾಯಿತಿಗೆ ಈ ನಿವೇಶನ ಅಭಿವೃದ್ಧಿಗೆ ಅವಕಾಶವಿಲ್ಲದಿದ್ದರೂ ಅನಾವಶ್ಯಕವಾಗಿ ತೊಂದರೆಯಾಗುತ್ತಿದೆ. ಈ ವಿಚಾರದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೆಶಕರುಗಳು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಸದಸ್ಯ ಕುಪ್ಪಂಡ ಗಿರೀಶ್ ಪೂವಣ್ಣ ಮಾತನಾಡಿ, ಹೊರಗಿನವರಿಗೆ ನೀಡಿರುವ ಹಕ್ಕುಪತ್ರಕ್ಕೂ ಈ ನಿವೇಶನದಲ್ಲಿನ ನಕ್ಷೆಗೂ ತಾಳೆಯಾಗುತ್ತಿಲ್ಲ. ಇದನ್ನು ಆಯಾ ಇಲಾಖೆ ಮನಗಂಡು ಸಮಸ್ಯೆ ಬಗೆಹರಿಸಲಿ. ನಮ್ಮ ಗ್ರಾಮದ ನೈಜ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಕಾನೂನು ಮೊರೆ ಹೋಗಲಾಗುವದು. ಸ್ಥಳೀಯ ನಿರಾಶ್ರಿತರಿಗೆ ನಿವೇಶನ ನೀಡುವದು ನಮ್ಮ ಪಂಚಾಯಿತಿ ಜವಬ್ದಾರಿಯಾಗಿದೆ ಎಂದರು.
ಗೋಷ್ಠಿಯಲ್ಲಿ ಸದಸ್ಯರುಗಳಾದ ಕುಲ್ಲಚಂಡ ಚಿಣ್ಣಪ್ಪ, ಶುಭಾಶ್, ಆಶಾಲತಾ ರೂಪಾ ಭೀಮಯ್ಯ ಉಪಸ್ಥಿತರಿದ್ದರು.