ಮಡಿಕೇರಿ, ಮಾ. 15: ಬೆಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪಾಲಿಬೆಟ್ಟದ ಕೂರ್ಗ್ ಫೌಂಡೇಷನ್, ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಹಾಗೂ ಸಿ.ಬಿ.ಆರ್. ಇದರ ಸಂಯುಕ್ತ ಆಶ್ರಯದಲ್ಲಿ ಜೇನು ಕೃಷಿ ತೋಟಗಾರಿಕೆ ಮತ್ತು ಭೂ ದೃಶ್ಯ ಕುರಿತು ವಿಶೇಷಚೇತನರಿಗೆ ಸ್ವಉದ್ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಸುಂಟಿಕೊಪ್ಪದ ಸ್ವಸ್ಥ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ನಬಾರ್ಡ್‍ನ ಮಹಾಪ್ರಬಂಧಕ ಎಂ.ಸಿ. ನಾಣಯ್ಯ, ಜೇನು ಕೃಷಿಯ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು ಮತ್ತು ವಿಶೇಷಚೇತನರು ತಯಾರಿಸಿದ ಜೇನು ಉತ್ಪನ್ನಗಳನ್ನು ಪ್ರತಿಯೊಬ್ಬರೂ ಖರೀದಿಸುವ ಮೂಲಕ ಮುಖ್ಯ ವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಕೂಡಿಗೆ ಕಾರ್ಪೋರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಡಾ. ಜಿ. ಸುರೇಶ್ ಮಾತನಾಡಿ, ನಿರುದ್ಯೋಗಿಗಳಾಗಿರುವ ಯುವಕರಿಗೆ ಸ್ವಉದ್ಯೋಗಗಳನ್ನು ನೀಡಲಾಗುತ್ತಿದೆ. ಈಗಾಗಲೇ 753 ಮಂದಿಗೆ ವಿವಿಧ ವೃತ್ತಿ ತರಬೇತಿಗಳನ್ನು ನೀಡಲಾಗಿದೆ. ಈ ಬಾರಿ ವಿಶೇಷ ಮಕ್ಕಳಿಗೂ ತರಬೇತಿ ನೀಡುವ ಬಗ್ಗೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಾಲಿಬೆಟ್ಟದ ಕೂರ್ಗ್ ಫೌಂಡೇಷನ್ ಟ್ರಸ್ಟ್‍ನ ಟ್ರಸ್ಟಿ ಎ.ಎಸ್. ಮುತ್ತಣ್ಣ ಮಾತನಾಡಿ, ಈ ಹಿಂದೆ ಸ್ವ ಉದ್ಯೋಗದಲ್ಲಿ ಕೇವಲ ಸೀಮಿತ ಉದ್ಯೋಗಗಳಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಉದ್ಯೋಗಕ್ಕೂ ತರಬೇತಿ ನೀಡುತ್ತಿರುವದು ಉತ್ತಮ ಬೆಳವಣಿಗೆ ಎಂದರು. ನಬಾರ್ಡ್ ಸಹ ವ್ಯವಸ್ಥಾಪಕಿ ಹರ್ಷಿತಾ ಮಾತನಾಡಿ, ಸ್ವಉದ್ಯೋಗದ ಮೂಲಕ ತಯಾರಿಸಿದ ವಸ್ತುಗಳಿಗೆ ಹೊರ ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ ಎಂದರು.