ಸೋಮವಾರಪೇಟೆ, ಮಾ. 15: ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಕ್ಷೇತ್ರದ ಮೇಲೆ ಗಧಾಪ್ರಹಾರವಾಗುತ್ತಿದ್ದು, ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿಯೂ ಸಹ ಹವಾಮಾನದ ಏರುಪೇರಿಗೆ ಬಲಿಯಾಗುತ್ತಿದೆ.

ಅತೀ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿರುವ ಉತ್ತರ ಕೊಡಗಿನಾದ್ಯಂತ ಪ್ರಸಕ್ತ ವರ್ಷದ ಹೂ ಮಳೆ ದೂರವಾಗಿದ್ದು, ಕೆಲವೆಡೆ 5 ರಿಂದ 20 ಸೆಂಟ್ ಮಳೆಯಾಗಿದ್ದರೆ, ಹಲವೆಡೆ ಇಂದಿಗೂ ಒಂದು ಹನಿಯೂ ಮಳೆಯಾಗಿಲ್ಲ. ಈ ಹಿಂದೆ ಸಾವಿರಾರು ಏಕರೆ ಪ್ರದೇಶಕ್ಕೆ ಒಮ್ಮೆಲೆ ಮಳೆಯಾಗುತ್ತಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಮದಿಂದ ಗ್ರಾಮಕ್ಕೆ ಮಳೆಯ ಪ್ರಮಾಣದಲ್ಲಿ ಭಾರೀ ಏರುಪೇರು ಕಂಡುಬರುತ್ತಿದೆ.

ಪಟ್ಟಣಕ್ಕೆ ಮಳೆ ಬಿದ್ದರೆ, ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿರುವ ಆಲೇಕಟ್ಟೆ, ಚೌಡ್ಲು, ಬೇಳೂರು ವ್ಯಾಪ್ತಿಯಲ್ಲಿ ಬಿರುಬಿಸಿಲು ಕಾಣಬರುತ್ತಿದ್ದು, ಪ್ರಕೃತಿಯ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಸಾಧಾರಣವಾಗಿ ಮಾರ್ಚ್ ಕೊನೆಯ ವಾರದಲ್ಲಿ ಬರುವ ರೇವತಿ ನಕ್ಷತ್ರದಲ್ಲಿ ಮಳೆ ಸುರಿದರೆ ಕಾಫಿ ಗಿಡಗಳಲ್ಲಿ ಮೊಗ್ಗು ಮೂಡಿ ಹೂ ಅರಳುತ್ತಿತ್ತು. ಅದಾಗಿ 15 ರಿಂದ 20 ದಿನಗಳ ನಡುವೆ ಮತ್ತೊಮ್ಮೆ ಮಳೆ ಸುರಿದರೆ ಕಾಫಿ ಗಿಡಗಳಲ್ಲಿ ಹೂವು ಸಮರ್ಪಕ ವಾಗುತ್ತಿತ್ತು ಪರಿಣಾಮ ಕಾಯಿಗಳು ಬಲಿತು ಹಣ್ಣಾಗಲು ಸಹಕಾರಿ ಯಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಫೆಬ್ರವರಿ ತಿಂಗಳಿನಲ್ಲಿಯೇ ಕೆಲವೆಡೆ ಮಳೆ ಸುರಿದಿದೆ. 40 ರಿಂದ 50 ಸೆಂಟ್ ಮಳೆ ಸುರಿದಿರುವ ಪ್ರದೇಶದಲ್ಲಿ ಹೂವು ಅರಳಿ ಕಾಫಿ ಕಾಯಿ ಕಟ್ಟುತ್ತಿದ್ದರೆ, ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ರಿಂದ 10 ಸೆಂಟ್ಸ್ ಒಳಗೆ ಮಳೆ ಸುರಿದಿದೆ. ಇಂತಹ ಅಲ್ಪ ಮಳೆಗೆ ಕಾಫಿ ಗಿಡಗಳಲ್ಲಿ ಮೊಗ್ಗು ಮೂಡಿದ್ದು, ನಂತರ ಮಳೆ ಬಾರದೇ ಇರುವದರಿಂದ ಗಿಡದಿಂದ ಮೊಗ್ಗು ಗಳು ಈಗಾಗಲೇ ಉದುರ ಲಾರಂಭಿಸಿವೆ. ಹೂಮಳೆ ಬಿದ್ದಿದ್ದರೂ ಮೊಗ್ಗು ಹೂವಾಗಿ ಅರಳಿ, ಕಾಯಿ ಕಟ್ಟಲು ಬೇಕಾದಷ್ಟು ತೇವಾಂಶ ಭೂಮಿಯಲ್ಲಿ ಇಲ್ಲದೇ ಇರುವದರಿಂದ ಕಾಫಿ ಗಿಡದಲ್ಲಿರುವ ಮೊಗ್ಗುಗಳು ಬಿರುಬಿಸಿಲಿಗೆ ಒಣಗಿ ಉದುರುತ್ತಿದೆ. ಗೌಡಳ್ಳಿ ಭಾಗದಲ್ಲಿ 20 ರಿಂದ 25 ಸೆಂಟ್ಸ್‍ನಷ್ಟು ಮಾತ್ರ ಮಳೆಯಾಗಿದ್ದು, ನೀರಿನ ಸೌಕರ್ಯ ಹೊಂದದೇ ಇರುವ ಕಾಫಿ ಬೆಳೆಗಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಜ್ಜಳ್ಳಿಯ ಬೆಳೆಗಾರ ನವೀನ್ ತಿಳಿಸಿದ್ದಾರೆ.

ಪಟ್ಟಣ ಸುತ್ತಮುತ್ತಲಿನ ಹೊಸಬೀಡು, ಮಾಟ್ನಳ್ಳಿ, ಆದಿಗಳಲೆ, ಅಬ್ಬೂರುಕಟ್ಟೆ, ಹಾನಗಲ್ಲು ವ್ಯಾಪ್ತಿಯಲ್ಲಿ ಅಲ್ಪ ಮಳೆಯಾಗಿದ್ದರೆ, ತೋಳೂರುಶೆಟ್ಟಳ್ಳಿ, ಕೂತಿ, ಬೇಳೂರು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಇಂದಿಗೂ ಮಳೆಯಾಗಿಲ್ಲ.

ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495 ಹೆಕ್ಟೇರ್‍ನಲ್ಲಿ ರೋಬಸ್ಟಾ, 28,030 ಹೆಕ್ಟೇರ್‍ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕು ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವದರಿಂದ 23,950 ಹೆಕ್ಟೇರ್‍ನಲ್ಲಿ ಅರೇಬಿಕಾ, 5,890 ಹೆಕ್ಟೇರ್‍ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.

ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಭಾರೀ ಪ್ರಮಾಣದ ಕಾಫಿ ನಷ್ಟ ಅನುಭವಿಸಿರುವ ಬೆಳೆಗಾರರು, ಪ್ರಸಕ್ತ ವರ್ಷಾರಂಭದಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಯಿಂದಾಗಿ ಇನ್ನಷ್ಟು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ತೋಳೂರುಶೆಟ್ಟಳ್ಳಿಯ ಬೆಳೆಗಾರ ಸುಧಾಕರ್, ಎಸ್.ಪಿ. ಮಾಚಯ್ಯ ಅವರುಗಳು ಅಭಿಪ್ರಾಯಿಸಿದ್ದಾರೆ.

- ವಿಜಯ್ ಹಾನಗಲ್