ಸೋಮವಾರಪೇಟೆ, ಮಾ. 16: ಕಳೆದ ತಾ. 19.02.2019ರಂದು ನಡೆದಿದ್ದ ಬೀಟೆ ಮರ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಈರ್ವರು ಆರೋಪಿಗಳನ್ನು ಸೋಮ ವಾರಪೇಟೆ ಅರಣ್ಯ ಇಲಾಖಾಧಿಕಾರಿ ಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಕಳೆದ ತಾ. 19.2.19ರಂದು ತಾಲೂಕಿನ ಐಗೂರು ಗ್ರಾಮದ ವಸಂತ್‍ಕುಮಾರ್ ಎಂಬವರ ತೋಟದಿಂದ ಬೀಟೆ ಮರವನ್ನು ಕಳವು ಮಾಡಿ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ ಮರವನ್ನು ಸ್ಥಳದಲ್ಲೇ ಬಿಟ್ಟು ಮಾರುತಿ ಓಮ್ನಿಯೊಂದಿಗೆ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ನೇತೃತ್ವದ ತಂಡ ಆರೋಪಿಗಳಾದ ಹೊಸಬೀಡು ಗ್ರಾಮದ ಮಂಜುನಾಥ್ ಅವರ ಪುತ್ರ ಹೆಚ್.ಎಂ. ಶಶಿಕುಮಾರ್ ಮತ್ತು ಐಗೂರು-ಕಾಜೂರು ಗ್ರಾಮದ ಚೇತನ್(ಚೇತು) ಅವರುಗಳನ್ನು ವಶಕ್ಕೆ ಪಡೆದಿದೆ. ಬೀಟೆ ಕಳ್ಳತನ ಮಾಡಿದ ಸಂದರ್ಭ ಬಳಸಲಾಗಿದ್ದ ಓಮ್ನಿ ವಾಹನವನ್ನು ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿ ಆರೋಪಿಗಳು ತಲೆಮರೆಸಿ ಕೊಂಡಿದ್ದರು.ಕಳೆದ 15 ದಿನಗಳ ಹಿಂದೆ ವಾಹನವನ್ನು ವಶಕ್ಕೆ ಪಡೆದಿದ್ದ ಅರಣ್ಯಾಧಿಕಾರಿಗಳು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಇಂದು ಆರೋಪಿಗಳು ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಆರ್‍ಎಫ್‍ಓ ಲಕ್ಷ್ಮೀಕಾಂತ್, ಅರಣ್ಯ ರಕ್ಷಕ ಯತೀಶ್ ಕುಮಾರ್, ಅರಣ್ಯ ವೀಕ್ಷಕರುಗಳಾದ ಪ್ರಸಾದ್, ವಿಜಯ್, ಚಾಲಕ ಚಂದ್ರು ಅವರುಗಳು ಕಾರ್ಯಾಚರಣೆ ನಡೆಸಿ ಆರೋಪಿ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.