ಶನಿವಾರಸಂತೆ, ಮಾ. 15: ಹೋಬಳಿ ಯಾದ್ಯಂತ ಮಾ. 1ರಂದು ಬಿದ್ದ 10 ಸೆಂಟ್ ಮಳೆಗೆ ಹಲವೆಡೆ ಕಾಫಿ ತೋಟಗಳಲ್ಲಿ ಗಿಡಗಳಲ್ಲಿ ಮೊಗ್ಗುಗಳು ಮೂಡಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿತ್ತು.
ಮತ್ತೆ 10-15 ದಿನಗಳೊಳಗೆ ಮಳೆ ಯಾಗಿ ಮೊಗ್ಗು ಬಿರಿದು ಹೂಗಳು ಅರಳುತ್ತವೆ. ಈ ವರ್ಷ ಕಾಫಿ ಫಸಲು ಚೆನ್ನಾಗಿ ಬರುತ್ತದೆ ಎಂಬ ಆಶಾಭಾವನೆಯಿಂದ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಈ ವಿಭಾಗದಲ್ಲಿ 10-14 ದಿನಗಳುರುಳಿದರೂ ಮತ್ತೆ ಮಳೆಯಾಗಲೇ ಇಲ್ಲ. ಬಿರು ಬಿಸಿಲು ಬಿಸಿಲಿನ ತಾಪಮಾನಕ್ಕೆ ಭೂಮಿಯು ಕಾದು ನಿಂತಿದೆ. ಭೂಮಿಯಲ್ಲಿ ಉಷ್ಣತೆ ಹೆಚ್ಚಾಗಿ ಕಾಫಿ ಗಿಡದಲ್ಲಿದ್ದ ಮೊಗ್ಗುಗಳು ಒಣಗಿ ಉದುರುತ್ತಿವೆ. ಗಿಡಗಳು ಒಣಗಿ ನಿಂತಿವೆ. ಕಾಳು ಮೆಣಸಿನ ಬಳ್ಳಿಗಳು ಒಣಗಿ ಹೋದ ಬೆನ್ನಲ್ಲೆ ಇದೀಗ ಕಾಫಿ ಗಿಡಗಳು ಒಣಗಿ ಹೋಗುತ್ತಿದ್ದು, ಬೆಳೆಗಾರರಲ್ಲಿ ಹತಾಶ ಭಾವನೆ ಮೂಡುತ್ತಿದೆ.
ಮಳೆಯಾಗುವ ಸೂಚನೆಯೇ ಕಾಣುತ್ತಿಲ್ಲ. ಬಿಸಿಲಿನ ವಾತಾವರಣ ಹೀಗೆ ಮುಂದುವರೆದರೆ ಶೇ. 80ರಷ್ಟು ಕಾಫಿ ಬೆಳೆ ನಾಶವಾಗಿ ಇಳುವರಿ ತೀರಾ ಕಡಿಮೆಯಾಗಿ ನಷ್ಟ ಅನುಭವಿಸುವದು ಖಚಿತ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್.