ಮಡಿಕೇರಿ, ಮಾ. 15: ಗೋಣಿಕೊಪ್ಪದ ಕಾವೇರಿ ಕಾಲೇಜು ಎನ್ಸಿಸಿ ಘಟಕ ಮತ್ತು ಕೊಡಗು ದಂತ ಮಹಾವಿದ್ಯಾಲಯ ಎನ್ಎಸ್ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಆವರಣದಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಅಭಿಯಾನ ನಡೆಯಿತು.
ಜಾಗೃತಿ ಅಭಿಯಾನಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದಿರುವವರು, ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು ಅವಕಾಶವಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದರು.
ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತದಾನ ಪ್ರಮುಖವಾಗಿದೆ. 18 ವರ್ಷ ಪೂರ್ಣಗೊಂಡವರೆಲ್ಲರೂ ಮತದಾನ ಮಾಡಬೇಕು. ಯಾವದೇ ಕಾರಣಕ್ಕೂ ಮತದಾನ ಹಕ್ಕು ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ನುಡಿದರು.
ಇಡೀ ವಿಶ್ವದಲ್ಲಿಯೇ ಮಾದರಿ ಸಂವಿಧಾನ ಒಳಗೊಂಡಿರುವ ರಾಷ್ಟ್ರದಲ್ಲಿ ‘ಮತದಾನ’ ಮಾಡುವದು ಒಂದು ಅವಕಾಶ. ಈ ಅವಕಾಶದಿಂದ ಅರ್ಹರು ವಂಚಿತರಾಗಬಾರದು ಎಂದು ಹೇಳಿದರು. ಲೋಕಸಭೆ ಚುನಾವಣೆಯ ವಿವಿಪ್ಯಾಟ್ ಮುಖಾಂತರ ತಾವು ಚಲಾಯಿಸಿದ ಮತವನ್ನು ಖಾತರಿ ಪಡಿಸಿಕೊಳ್ಳುವಂತಹ ಅವಕಾಶವಿದ್ದು, ಪ್ರತಿಯೊಬ್ಬ ಮತದಾರನು ತಪ್ಪದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಹೆಚ್ಚು ಪ್ರಚಾರ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜಾಥಾವು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಸೋಮವಾರಪೇಟೆಯ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ವಿಶೇಷಚೇತನರ ಇಲಾಖೆಯಿಂದ ತ್ರಿಚಕ್ರ ವಾಹನ ರ್ಯಾಲಿಯು ನಡೆಯಿತು.