ಮಡಿಕೇರಿ, ಮಾ. 15: ವೀರಾಜಪೇಟೆ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ತಾ. 31 ರಂದು ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಗೋಣಿಕೊಪ್ಪಲಿನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಕೆ. ರವಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗೋಣಿಕೊಪ್ಪದಲ್ಲಿ ಬೈಪಾಸ್ ರಸ್ತೆಯ ಬಳಿಯ ಮೈದಾನದಲ್ಲಿ ಅಂದು ಪೂರ್ವಾಹ್ನ 9 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದ್ದು, ಸುಮಾರು 25 ರಿಂದ 30 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆಯೆಂದು ಮಾಹಿತಿ ನೀಡಿದರು.

ಪಂದ್ಯಾವಳಿಯ ವಿಜೇತ ತಂಡಕ್ಕೆ 25 ಸಾವಿರ ರೂ. ನಗದು, ದ್ವಿತೀಯ ತಂಡಕ್ಕೆ 15 ಸಾವಿರ ರೂ., ತೃತೀಯ 5 ಸಾವಿರ ರೂ. ಹಾಗೂ ಚತುರ್ಥ ಸ್ಥಾನ ಪಡೆಯುವ ತಂಡಕ್ಕೆ 3 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು. ಅಲ್ಲದೆ, ಪಂದ್ಯ ಪುರುಷೋತ್ತಮ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಮತ್ತು ಉತ್ತಮ ತಂಡವನ್ನು ಪುರಸ್ಕರಿಸಲಾಗುವದು ಎಂದು ವಿವರಿಸಿದರು. ಪಂದ್ಯಾವಳಿ ಯಲ್ಲಿ ಭಾಗವಹಿಸುವ ತಂಡಗಳಿಗೆ ಸಮವಸ್ತ್ರ ಕಡ್ಡಾಯವಾಗಿದ್ದು, ಪ್ರವೇಶ ಶುಲ್ಕ 1500 ರೂ.ಗಳೊಂದಿಗೆ ಮಾ.25ರ ಒಳಗಾಗಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9986954449 ಅಥವಾ 9945310096ನ್ನು ಸಂಪರ್ಕಿಸ ಬಹುದೆಂದು ಹೇಳಿದರು.

ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಡಾಡು ಜೋಸೆಫ್ ಮಾತನಾಡಿ, ಪ್ರತಿವರ್ಷ ಸಂಘದ ವತಿಯಿಂದ ವಿವಿಧ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಕೊಂಡು ಬರಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಮ್ಯಾಟ್ ಕಬಡ್ಡಿಯನ್ನು ಆಯೋಜಿಸಲಾಗುತ್ತಿದೆ. ಪಂದ್ಯಾವಳಿ ಯಲ್ಲಿ ಕೊಡಗಿನ ಹಳೆಯ ಕಬಡ್ಡಿ ಚಾಂಪಿಯನ್‍ಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಡಳಿತ ನಡೆಸುವ ಛಾಯಾಗ್ರಹಣಕ್ಕೆ ಸ್ಥಳೀಯ ಛಾಯಾಗ್ರಾಹಕರನ್ನೆ ಪರಿಗಣಿಸುವಂತೆ ಅವರು ಇದೇ ಸಂದರ್ಭ ಮನವಿ ಮಾಡಿಕೊಂಡರು.

ಸಂಘದ ತಾಲೂಕು ಉಪಾಧ್ಯಕ್ಷ ಸಿ.ಎ. ನಾಸಿರ್ ಮಾತನಾಡಿ, ಕಬಡ್ಡಿ ಪಂದ್ಯಾವಳಿ ಸಂದರ್ಭದಲ್ಲಿ ಜಿಲ್ಲೆಯ ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಆಸಕ್ತ ಛಾಯಾಗಾಹಕರು 12x18 ಇಂಚು ಅಳತೆಯ ಛಾಯಾಚಿತ್ರಗಳನ್ನು ತಮ್ಮ ಭಾವಚಿತ್ರ, ಮೊಬೈಲ್ ಸಂಖ್ಯೆಯೊಂದಿಗೆ ತಾ. 28 ರೊಳಗಾಗಿ ಸಂಘಕ್ಕೆ ತಲಪಿಸಬೇಕು. ಛಾಯಾ ಚಿತ್ರಗಳನ್ನು ಅತ್ಯಂತ ಸುರಕ್ಷಿತವಾಗಿ ಪ್ರದರ್ಶಿಸಿ, ಹಿಂದಿರುಗಿಸುವ ಜವಬ್ದಾರಿ ಸಂಘದ್ದಾಗಿದೆ ಎಂದು ತಿಳಿಸಿದರು.

ಸಂಘದ ತಾಲೂಕು ಅಧ್ಯಕ್ಷ ಮೈಕೆಲ್ ಮಾತನಾಡಿ, ಸಂಘವು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಸಾರ್ವಜನಿಕರ ಸಹಕಾರ ನಮ್ಮ ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯವಾಗಿದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಘದ ಕಾರ್ಯದರ್ಶಿ ಪಿ.ಜೆ. ಶರತ್ ಹಾಗೂ ಮಾಜಿ ಅಧ್ಯಕ್ಷ ಕೆ.ಬಿ. ಸುನಿಲ್ ಉಪಸ್ಥಿತರಿದ್ದರು.