ಕುಶಾಲನಗರ, ಮಾ. 15: ಲೋಕಸಭಾ ಚುನಾವಣೆ ದಿನಾಂಕ ಹೊರಬಿದ್ದ ಬೆನ್ನಲ್ಲೇ ಮೈಸೂರು-ಕೊಡಗು ಸಂಸದರಾಗಿದ್ದ ಪ್ರತಾಪ್ ಸಿಂಹ ಕುಶಾಲನಗರಕ್ಕೆ ದಿಢೀರನೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಆಂತರಿಕ ಚರ್ಚೆ ನಡೆಸಿದರು. ಕುಶಾಲನಗರ ಸಮೀಪ ಪಕ್ಷದ ಪ್ರಮುಖರೊಬ್ಬರ ನಿವಾಸದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಸೇರಿದಂತೆ ಕುಶಾಲನಗರದ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಮುಂದಿನ ಚುನಾವಣೆ ಬಗ್ಗೆ ಚರ್ಚೆ ನಡೆಸಿ ಪ್ರಮುಖರಿಗೆ ಸ್ಥಳೀಯ ಜವಾಬ್ದಾರಿಗಳನ್ನು ಹಂಚಿದರು ಎಂದು ತಿಳಿದು ಬಂದಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ತನ್ನನ್ನೇ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡುವ ಸಂಭವವಿದ್ದು ಗೆಲುವಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುವಂತೆ ಪ್ರತಾಪ್ ಸಿಂಹ ಕಾರ್ಯಕರ್ತರಲ್ಲಿ ಮನವಿ ಮಾಡಿದರು ಎನ್ನಲಾಗಿದೆ.ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.