ಸೋಮವಾರಪೇಟೆ, ಮಾ.15: ಟೆಂಡರ್ ಪ್ರಕ್ರಿಯೆಯಂತೆ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಾನ್ವೆಂಟ್ಬಾಣೆಯಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಮತದಾರರು ಎಚ್ಚರಿಸಿದ್ದು, ಈ ಬಗ್ಗೆ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ವೆಂಟ್ಬಾಣೆ ಪ.ಜಾತಿ ನಿವಾಸಿಗಳ ಮನೆಗಳಿಗೆ ಸಂಪರ್ಕ ಕಲ್ಪಿಸಲು 2018-19ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ಎಸ್ಸಿಪಿ ಯೋಜನೆಯಡಿಯಲ್ಲಿ ರೂ. 10 ಲಕ್ಷ ಅನುದಾನವನ್ನು ಮೀಸಲಿಟ್ಟಿದ್ದು, ಟೆಂಡರ್ ಸಹ ಮುಗಿದು ಗುತ್ತಿಗೆದಾರರಿಗೆ ಅಗ್ರಿಮೆಂಟ್ ಸಹ ಮಾಡಲಾಗಿದೆ. ಈ ಮಧ್ಯೆ ಕೆಲ ರಾಜಕೀಯ ಮುಖಂಡರು ಕಾಮಗಾರಿಯನ್ನು ಬೇರೆಡೆಗೆ ವರ್ಗಾಯಿಸಲು ಸಂಚು ರೂಪಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾನ್ವೆಂಟ್ಬಾಣೆಯ ಶಾಂತಮಣಿ ಮನೆ ಸಮೀಪ 45 ಮೀಟರ್ ಉದ್ದ ಹಾಗೂ 3 ಮೀ. ಅಗಲದ ಕಾಂಕ್ರೀಟ್ ರಸ್ತೆ, ಮಹೇಶ್ ಮನೆ ಹತ್ತಿತ 116 ಮೀ. ಉದ್ದ ಹಾಗೂ 4 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ, ಬಂಗಾರಮ್ಮನ ಮನೆ ಹತ್ತಿರ 22 ಮೀಟರ್ ಉದ್ದದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ಗಳನ್ನು ಅಳವಡಿಸಲು ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆದು ಟೆಂಡರ್ ನೀಡಲಾಗಿದ್ದು, ಇದೀಗ ಕಾಮಗಾರಿ ನಿರ್ವಹಿಸದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಎಲ್ಲಾ ರಸ್ತೆ ಹಾಗೂ ಚರಂಡಿಗಳು ಅತೀ ಅವಶ್ಯವಾಗಿದ್ದು, ಚರಂಡಿಯ ಅವ್ಯವಸ್ಥೆಯಿಂದ ಈಗಾಗಲೇ ಇಡೀ ಪ್ರದೇಶ ದುರ್ನಾತ ಬೀರುತ್ತಿದೆ. ರಸ್ತೆ ಇಲ್ಲದೇ ಇರುವದರಿಂದ ತೀರಾ ತೊಂದರೆ ಅನುಭವಿಸುತ್ತಿದ್ದೇವೆ. ತಾ.4.2.2019ರಂದು ಕಾಮಗಾರಿ ಪ್ರಾರಂಭಿಸಬೇಕಿದ್ದರೂ ಇಂದಿಗೂ ಕೆಲಸ ಪ್ರಾರಂಭಿಸಿಲ್ಲ. ಈ ಸ್ಥಳದಲ್ಲಿ ಕಾಮಗಾರಿ ಮಾಡಬಾರದೆಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು ತಡೆಯೊಡ್ಡುತ್ತಿದ್ದು, ಲೋಕೋಪಯೋಗಿ ಇಲಾಖಾಧಿಕಾರಿಗಳು ಕಾಮಗಾರಿ ನಿರ್ವಹಿಸದೇ ಇದ್ದಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಂತೆ ಕಾಮಗಾರಿ ನಿರ್ವಹಿಸದೇ ಇದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಈ ಭಾಗದ ಸಾರ್ವಜನಿಕರು ಬಹಿಷ್ಕರಿಸುತ್ತೇವೆ ಎಂದು ಸಾರ್ವಜನಿಕರಾದ ಆನಂದ್, ಮಣಿ, ಗಣೇಶ್, ದೇವಕ್ಕಿ, ಮಹೇಶ್, ಲಕ್ಷ್ಮೀ, ಮಲ್ಲಿಗೆ, ನೇತ್ರ, ಶಾಂತ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.