ಕುಶಾಲನಗರ, ಮಾ. 16: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗಗಳಲ್ಲಿ ವಾಹನಗಳ ತಪಾಸಣಾ ಕೇಂದ್ರಗಳನ್ನು ಆರಂಭಿಸುವ ಕಾರ್ಯ ನಡೆದಿದೆ. ಕೊಡಗು-ಮೈಸೂರು ಗಡಿಭಾಗದ ಕುಶಾಲನಗರ ಅರಣ್ಯ ಚೆಕ್‍ಪೋಸ್ಟ್ ಬಳಿ ಈಗಾಗಲೆ ಶೆಡ್ ನಿರ್ಮಾಣವಾಗಿದ್ದು ಕೆಲವು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆ ಕಾಲ ತಪಾಸಣೆ ಕಾರ್ಯ ನಡೆಯಲಿದ್ದು ಹಣ, ಮದ್ಯ ಸಾಗಾಟ ಸೇರಿದಂತೆ ಮತದಾರರಿಗೆ ಹಂಚಲು ಕೊಂಡೊಯ್ಯುವ ವಸ್ತುಗಳ ತಪಾಸಣೆಯನ್ನು ಈ ಕೇಂದ್ರದ ಅಧಿಕಾರಿಗಳು ನಡೆಸಲಿದ್ದಾರೆ.

ಚುನಾವಣಾ ಕಾರ್ಯ ಮುಗಿಯುವ ತನಕ ಈ ಕೇಂದ್ರ ಕಾರ್ಯಾಚರಣೆ ನಡೆಸಲಿದ್ದು ಹಲವು ಹಂತದ ಅಧಿಕಾರಿಗಳು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುವರು. ಸಿಸಿ ಕ್ಯಾಮೆರಾ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತಪಾಸಣಾ ಕೇಂದ್ರದಲ್ಲಿ ಒದಗಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲೆಡೆ ಬ್ಯಾನರ್ ಮತ್ತಿತರ ಜಾಹೀರಾತುಗಳ ಫಲಕಗಳನ್ನು ತೆರವುಗೊಳಿಸುವ ಕಾರ್ಯವನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪೌರಕಾರ್ಮಿಕರು ನಡೆಸುತ್ತಿದ್ದಾರೆ.