ಸುಂಟಿಕೊಪ್ಪ, ಮಾ. 16: ಸರ್ಕಾರಿ ಪ್ರೌಢಶಾಲೆ ಕಾನ್ಬೈಲ್, ಸರ್ಕಾರಿ ಪ್ರೌಢಶಾಲೆ ಕಿರಗಂದೂರು ಮತ್ತು ಸೀಕೋ ಸಂಸ್ಥೆ ಬಾನುಗೊಂದಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲೆ ಕಾನ್ಬೈಲ್ನಲ್ಲಿ ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಯಿತು.
ವಿವಿಧ 16 ಸರ್ಕಾರಿ ಪ್ರೌಢಶಾಲೆಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು. ಎಳೆಯ ಮನಸ್ಸುಗಳಿಗೆ ತೇಜಸ್ವಿ ಪರಿಸರದ ಪರಿಚಯ ಎನ್ನುವ ವಿಷಯವಾಗಿ ಕೂಡ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು. ಈ ಎರಡು ವಿಷಯಗಳ ಕುರಿತು ಗ್ರಾಮೀಣ ಪ್ರತಿಭೆಗಳು ತಮ್ಮ ವಿಷಯ ಮಂಡನೆ ಮಾಡಿ ನೆರೆದವರ ಗಮನ ಸೆಳೆದರು.
ಅದೇ ರೀತಿ ಸರ್ಕಾರಿ ಪ್ರೌಢಶಾಲೆ ಕಿರಗಂದೂರಿನ ಶಿಕ್ಷಕಿ ರಶ್ಮಿ, ಸರ್ಕಾರಿ ಪ್ರೌಢಶಾಲೆ ಕಾನ್ ಬೈಲ್ನ ಶಿಕ್ಷಕ ದಿನೇಶ್ ಕೆ.ಎನ್. ಅವರನ್ನು ಶಾಲೆಯಲ್ಲಿ ಕೈಗೊಂಡಿರುವ ಪರಿಸರ ಸ್ನೇಹಿ ಸೇವೆಗಾಗಿ ಸನ್ಮಾನಿಸಲಾಯಿತು. ಸಂವಾದ, ಚಿತ್ರಕಲೆ, ಸ್ಲೋಗನ್ ಬರಹದಲ್ಲಿ ಉತ್ತಮ ಸ್ಪರ್ಧೆ ತೋರಿದ ಮಕ್ಕಳಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಶಾಲೆಗಳಿಗೆ, ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ಸೀಕೋ ಸಂಸ್ಥೆಯ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸೀಕೋ ಸಂಸ್ಥೆಯ ನಿರ್ದೇಶಕ ಡಾ. ಹರೀಶ್ಕುಮಾರ್ ಪರಿಸರದ ಬಗ್ಗೆ ಬೋಧನೆಗಿಂತ ಪರಿಸರದಲ್ಲಿ ಇಳಿದು ಕೆಲಸ ನಿರ್ವಹಿಸುವದು ಇಂದಿನ ಅಗತ್ಯ, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಈ ಸಂದಭ ಸೀಕೋ ಸಂಸ್ಥೆಯ ಕಾರ್ಯಕರ್ತರಾದ ಡಾ. ಚೇತನ್, ಲಾವಣ್ಯ, ಗಣೇಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ತಾಲೂಕು ಘಟಕದ ಅಧ್ಯಕ್ಷ ಧರ್ಮಪ್ಪ ಡಿ.ಪಿ., ನಾಕೂರು-ಶಿರಂಗಾಲ ಗ್ರಾ.ಪಂ ಸದಸ್ಯ ಚಂದ್ರಶೇಖರ್, ಹಿರಿಯರಾದ ನೀಲಮ್ಮ ಪೆಮ್ಮಯ್ಯ, ಕರ್ನಾಟಕ ವಿಜ್ಞಾನ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಟಿ.ಜಿ. ಪ್ರೇಮ್ಕುಮಾರ್, ಮುಖ್ಯ ಶಿಕ್ಷಕ ಮಂಜೇಶ್ ಎಂ.ವಿ., ಸಹ ಶಿಕ್ಷಕರು, ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು, ಮಕ್ಕಳು, ಅಡುಗೆ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.