ಸೋಮವಾರಪೇಟೆ, ಮಾ. 16: ಚುನಾವಣೆಗಳಲ್ಲಿ ಮತದಾರರು ಯಾವದೇ ಆಮಿಷಗಳಿಗೆ ಬಲಿಯಾಗದೇ ಪ್ರಜಾಸತ್ತಾತ್ಮಕವಾಗಿ ಪ್ರಾಪ್ತವಾಗಿರುವ ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಬೇಕು. ಆಗ ಮಾತ್ರ ಉತ್ತಮ ನಾಯಕರುಗಳನ್ನು ಆಯ್ಕೆ ಮಾಡಲು ಸಹಾಯಕವಾಗುತ್ತದೆ ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಅವರು ಕರೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೋರ್ವರ ಮತವೂ ಅಮೂಲ್ಯವಾದುದು. ನನ್ನ ಒಂದು ಮತದಿಂದ ಏನಾಗುತ್ತದೆ ಎಂಬ ಉದಾಸೀನತೆಯನ್ನು ಬಿಟ್ಟು ಮತದಾನದಲ್ಲಿ ಭಾಗವಹಿಸಬೇಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು. ಪ್ರಾಮಾಣಿ ಕತೆಯಿಂದ ಮತ ಚಲಾಯಿಸುವ ಮೂಲಕ ಭ್ರಷ್ಟಾಚಾರ ಮುಕ್ತ ದೇಶ ನಿರ್ಮಿಸಲು ಪ್ರತಿಯೋರ್ವರು ಮುಂದಾಗಬೇಕು ಎಂದರು.
1986ರಲ್ಲಿ ಗ್ರಾಹಕರ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಗ್ರಾಹಕರು ಯಾವದೇ ರೀತಿಯ ಖರೀದಿಯಲ್ಲಿ ಮೋಸ ಹೋದರೆ ತಕ್ಷಣ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸ ಬಹುದು. ಸುಳ್ಳು ಜಾಹೀರಾತುಗಳಿಗೆ ಮರುಳಾಗುವ ಬದಲು ಪ್ರಮಾಣಿಸಿ ನೋಡಬೇಕು.
‘ರೆಡಿಮೇಡ್ ಫುಡ್’ಗಳನ್ನು ಬಳಸುವ ಬದಲು ಪ್ರಕೃತ್ತಿದತ್ತವಾದ ಆಹಾರ ಪದಾರ್ಥಗಳನ್ನು ಬಳಸಬೇಕು ಎಂದ ನ್ಯಾಯಾಧೀಶರು, ಯಾವದೇ ಕಾರಣಕ್ಕೂ ಸುಳ್ಳು ಪ್ರಕರಣಗಳನ್ನು ದಾಖಲಿಸಬಾರದು.
ನ್ಯಾಯಾಲಯದ ವಿಚಾರಣೆ ಸಂದರ್ಭ ಸುಳ್ಳು ದೂರು ನೀಡಿರುವದು ಕಂಡುಬಂದರೆ, ದೂರುದಾರರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಮಾಹಿತಿ ಒದಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ಸುನಿಲ್, ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖಾಧಿಕಾರಿ ಬಿ.ಪಿ. ದೇವರಾಜ್ ಉಪಸ್ಥಿತರಿದ್ದರು. ವಕೀಲರಾದ ಮನೋಹರ್ ಅವರು ಗ್ರಾಹಕರ ವೇದಿಕೆ, ಗ್ರಾಹಕರ ಹಕ್ಕುಗಳ ಬಗ್ಗೆ ಸವಿಸ್ತಾರ ಮಾಹಿತಿ ಒದಗಿಸಿದರು.