ಕುಶಾಲನಗರ, ಮಾ, 14: ಕುಶಾಲನಗರದ ಯುವಕ ಸೇರಿದಂತೆ ಕೊಡಗು ಜಿಲ್ಲೆಯ ಮೂವರು ರಾಷ್ಟ್ರೀಯ ಕಿರಿಯರ ಹಾಕಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಕುಶಾಲನಗರದ ತ್ರಿಶೂಲ್ ಗಣಪತಿ, ಕಂಡಂಗಾಲದ ಚಂದೂರ ಪೂವಣ್ಣ ಮತ್ತು ಸೋಮವಾರಪೇಟೆ ಸೂರ್ಯಮೋಹನ್ ಆಯ್ಕೆಯಾದ ಕ್ರೀಡಾಪಟುಗಳು.
ಭಾರತದ ಕಿರಿಯ ಸಂಭಾವ್ಯ 60 ಹಾಕಿ ಪಟುಗಳನ್ನು ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಒಟ್ಟು ನಾಲ್ವರು ಆಯ್ಕೆಯಾಗಿದ್ದಾರೆ. ಇದರಲ್ಲಿ 33 ಮಂದಿಯನ್ನು ಅಂತಿಮ ತರಬೇತಿ ಶಿಬಿರದಲ್ಲಿ ಉಳಿಸುವ ಮೂಲಕ ಮುಂಬರುವ 2021 ವಿಶ್ವಕಪ್ ಜೂನಿಯರ್ ಹಾಕಿ ಪಂದ್ಯಾಟಕ್ಕೆ ಕಠಿಣ ತರಬೇತಿಗೊಳಿಸಲಾಗುವದು.
ತ್ರಿಶೂಲ್ ಗಣಪತಿ ಕುಶಾಲನಗರದ ಕೂಡಿಗೆ ಕ್ರೀಡಾ ಶಾಲೆಯ 2013-14 ರ ಸಾಲಿನ ಹಳೆ ವಿದ್ಯಾರ್ಥಿಯಾಗಿದ್ದು ಸ್ಥಳೀಯ ಉದ್ಯಮಿ ಹಾನಗಲ್ ಗಣೇಶ್ ಮತ್ತು ರೂಪ ಗಣೇಶ್ ದಂಪತಿಯ ಪುತ್ರ. ಸತತ 3 ಬಾರಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯ ಕಿರಿಯರ ತಂಡವನ್ನು ಪ್ರತಿನಿಧಿಸಿರುವ ತ್ರಿಶೂಲ್ ಪ್ರಸಕ್ತ ಬೆಂಗಳೂರು ಸಾಯಿಯಲ್ಲಿ ತರಬೇತಿಯಲ್ಲಿದ್ದರು.
ಕಂಡಂಗಾಲ ಗ್ರಾಮದ ನಿವಾಸಿ ಪೂವಣ್ಣ ಚಂದೂರ ಬಾಬಿ ಮತ್ತು ಅನಿಲ ದಂಪತಿಯ ಪುತ್ರ, ಸೂರ್ಯ ಸೋಮವಾರಪೇಟೆ ಎಂಡಿ ಬ್ಲಾಕ್ನ ನಿವಾಸಿ ಮೋಹನ್ ಮತ್ತು ಶೋಭಾ ದಂಪತಿಯ ಪುತ್ರ.