ಮಡಿಕೇರಿ, ಮಾ. 14: ಲೋಕಸಭೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಈ ತನಕ ಐತಿಹ್ಯಗಳು ವಿಭಿನ್ನವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನ ಬ್ರಿಟೀಷ್ ಕ್ಯಾಬಿನೆಟ್ ಕೌನ್ಸಿಲ್ ರೆಕಮೆಂಡೇಷನ್ ಪ್ರಕಾರ ರಚಿಸಿದ ಸಂವಿಧಾನ ಘಟನಾ ಸಮಿತಿ (ಕಾನ್ಸ್‍ಟಿಟ್ಯುಯೆಂಟ್ ಅಸೆಂಬ್ಲಿ)ಯ 338 ಸದಸ್ಯರ ಪೈಕಿ ಕೊಡಗಿನಿಂದ ಸಿ.ಎಂ. ಪೂಣಚ್ಚ ಅವರು ಓರ್ವ ಸದಸ್ಯರಾಗಿದ್ದರು. ಸಂವಿಧಾನ ರಚನೆಯ ಬಳಿಕ 1952ರಿಂದ 57ರ ತನಕ ಕೊಡಗಿನ ನಿಡ್ಯಮಲೆ ಸೋಮಣ್ಣ ಅವರು ಲೋಕಸಭಾ ಸದಸ್ಯರಾಗಿದ್ದರೆ ಇದೇ ಅವಧಿಯಲ್ಲಿ ಕೊಳ್ಳಿಮಾಡ ಕರುಂಬಯ್ಯ ಅವರು ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಇದಾದ ಬಳಿಕ ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆ ಮಂಗಳೂರಿನೊಂದಿಗೆ ಸೇರಿಸಲ್ಪಟ್ಟು ಕೊಡಗು - ಮಂಗಳೂರು ಲೋಕಸಭಾ ಕ್ಷೇತ್ರವಾಗಿತ್ತು. 1957 ರಿಂದ 62ರವರೆಗೆ ಮಂಗಳೂರಿನವರಾದ ಕೆ.ಆರ್. ಆಚಾರ್ ಅವರು ಲೋಕಸಭಾ ಸದಸ್ಯರಾಗಿದ್ದರು. ಇದಾದ ನಂತರ 1962 ರಿಂದ 67ರ ತನಕ ಮಂಗಳೂರಿನವರೇ ಆದ ಶಂಕರ್ ಆಳ್ವ ಅವರು ಈ ಕ್ಷೇತ್ರದ ಪ್ರತಿನಿಧಿಯಾಗಿದ್ದರು.
1967ರಿಂದ 71ರ ಅವಧಿಯಲ್ಲಿ ಕೊಡಗಿನವರಾದ ಸಿ.ಎಂ. ಪೂಣಚ್ಚ ಅವರು ಲೋಕಸಭಾ ಸದಸ್ಯರಾಗಿ ಕೇಂದ್ರದ ರೈಲ್ವೆ ಸಚಿವರೂ ಆಗಿದ್ದುದು ಒಂದು ಇತಿಹಾಸ. 1969ರಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಸಂದರ್ಭದಲ್ಲಿ ಪ್ರತಿನಿಧಿಯಾಗಿದ್ದ ಸಿ.ಎಂ. ಪೂಣಚ್ಚ ಅವರು ಸಂಸ್ಥಾ ಕಾಂಗ್ರೆಸ್‍ನ ನಿಜ ಲಿಂಗಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದರು. 1971ರ ಚುನಾವಣೆಯಲ್ಲಿ ಮತ್ತೆ ಮಂಗಳೂರಿನ ಕೆ.ಕೆ. ಶೆಟ್ಟಿ ಅವರು ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು.
ನಂತರದಲ್ಲಿ ಪೂಜಾರಿ
1977ರಿಂದ 1990 ತನಕದ ಒಟ್ಟು ನಾಲ್ಕು ಅವಧಿಯಲ್ಲಿ ಜನಾರ್ಧನ ಪೂಜಾರಿ ಅವರು ಕೊಡಗು - ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದು, ಸತತವಾಗಿ ನಾಲ್ಕು ಅವಧಿಯಲ್ಲಿ ಪ್ರತಿನಿಧಿಯಾಗಿದ್ದರು.
ಬದಲಾದ ರಾಜಕೀಯ
1990ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಾಬಲ್ಯ ಮೆರೆಯಿತು. ಈ ಚುನಾವಣೆಯಲ್ಲಿ ಪೂಜಾರಿ ಅವರ ವಿರುದ್ಧ ಗೆಲವು ಸಾಧಿಸಿದ ವಿ. ಧನಂಜಯಕುಮಾರ್ ಅವರು 1990ರಿಂದ 2004ರ ತನಕ ಮೂರು ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಕೊಡಗಿನ ಅಳಿಯ ಡಿ.ವಿ. ಸದಾನಂದಗೌಡ ಅವರು ಚುನಾಯಿತರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಬದಲಾದ ಕ್ಷೇತ್ರ
2004-09ರ ಅವಧಿಯ ತನಕ ಕೊಡಗು - ಮಂಗಳೂರು ಲೋಕಸಭಾ ಕ್ಷೇತ್ರವಾಗಿದ್ದ ಇದು ಮತ್ತೆ ಬದಲಾವಣೆಗೊಂಡಿತು. ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರವಂತೂ ಸಿಗಲಿಲ್ಲ ಬದಲಿಗೆ ಕೊಡಗು ಜಿಲ್ಲೆ ಮೈಸೂರಿನೊಂದಿಗೆ ಸೇರಿಸಲ್ಪಟ್ಟು ಕೊಡಗು - ಮೈಸೂರು ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು.
ವೀರಾಜಪೇಟೆ, ಮಡಿಕೇರಿ ಸೇರಿ ಕೊಡಗಿನೊಂದಿಗೆ, ನೆರೆಯ ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ಮೈಸೂರಿನ ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಈ ಎಂಟು ವಿಧಾನಸಭಾ ಕ್ಷೇತ್ರಗಳು ಒಳಗೊಂಡು ಕೊಡಗು - ಮೈಸೂರು ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಡಗೂರು ಎಚ್. ವಿಶ್ವನಾಥ್ ಅವರು ಜಯಗಳಿಸಿ ಐದು ವರ್ಷದ ಅವಧಿಗೆ ಇಲ್ಲಿನ ಪ್ರತಿನಿಧಿಯಾಗಿದ್ದರು.
ಕಳೆದ ಬಾರಿ ಸಿಂಹ
2014ರಲ್ಲಿ ನಡೆದ ಚುನಾವಣೆಯಲ್ಲಿ ಅಡಗೂರು ವಿಶ್ವನಾಥ್ ಅವರ ಎದುರು ಅಚ್ಚರಿಯ ಸ್ಪರ್ಧಿಯಾಗಿ ಅವಕಾಶ ಪಡೆದಿದ್ದ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಅವರು ‘ಹಳ್ಳಿ ಹಕ್ಕಿ’ ಖ್ಯಾತಿಯ ವಿಶ್ವನಾಥ್ ಅವರನ್ನು ಪರಾಭವಗೊಳಿಸಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ಮೂಲಕ ಈ ಕ್ಷೇತ್ರದ ಸಂಸದರಾಗಿದರು.
16ನೇ ಲೋಕಸಭೆ
2014ರಲ್ಲಿ ಜರುಗಿದ್ದು 16ನೇ ಲೋಕಸಭಾ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಕೊಡಗು - ಮೈಸೂರು ಕ್ಷೇತ್ರದಿಂದ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಇತರ ಹಲವು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿ 15 ಮಂದಿ ಕಣದಲ್ಲಿದ್ದ ಈ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರು, ಕಾಂಗ್ರೆಸ್‍ನ ಅಡಗೂರು ವಿಶ್ವನಾಥ್ ಅವರ ಎದುರು 31,608 ಮತಗಳ ಅಂತರದಿಂದ ಜಯಗಳಿಸಿದ್ದರು.
ಇದೀಗ 17ನೇ ಲೋಕ ಸಮರ
ಇದೀಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಎದುರಾಗಿದೆ. ಇದು 17ನೇ ಲೋಕಸಭಾ ಸಮರವಾಗಿದ್ದು, ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಚುನಾವಣೆಯಲ್ಲಿನ ಗಮನಾರ್ಹ ಅಂಶವೆಂದರೆ ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದ್ದು, ಈ ಚುನಾವಣೆಯನ್ನು ಈ ಎರಡು ಪಕ್ಷಗಳು ಹೊಂದಾಣಿಕೆಯೊಂದಿಗೆ ಎದುರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಈ ಬಾರಿ ಮಿತ್ರ ಪಕ್ಷಗಳ ಹೊಂದಾಣಿಕೆಯಂತೆ ಈಗಿನ ನಿರ್ಧಾರದಂತೆ ಕೊಡಗು - ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತಿಲ್ಲ. ಇದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹೋರಾಟ ನಡೆಯುವದು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸದ್ಯದಲ್ಲಿ ಆರಂಭವಾಗಲಿದ್ದು, ಈ ಬಾರಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಯಾರು ಎಂಬದು ನಿರ್ಧಾರವಾಗಲಿದೆ.