ವೀರಾಜಪೇಟೆ, ಮಾ, 14: ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಮಲೆಮಹಾದೇಶ್ವರ ದೇವಸ್ಥಾನದಲ್ಲಿ ತಾ.15ರಿಂದ (ಇಂದಿನಿಂದ) ತಾ.20ರವರೆಗೆ ಮಲೆಮಹಾದೇಶ್ವರ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೊಳುವಂಡ ಸುಮಂತ್ ಪೊನ್ನಣ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ತಾ15ರಂದು ದೇವಾಲಯದಲ್ಲಿ ರಾತ್ರಿ 7 ಗಂಟೆಗೆ ಕೊಡಿಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಿದ್ದು ರಾತ್ರಿ 8 ಗಂಟೆಗೆ ಮಹಾಪೂಜಾ ಸೇವೆ ಜರುಗಲಿದೆ. ತಾ.16ರಂದು ಕಾಪು, ಪದ್ಧತಿಯಂತೆ ವಿವಿಧ ಪೂಜಾ ಸೇವೆಗಳು, ತಾ.17ರಂದು ಇರ್ ಬೊಳಕ್ ತಾ.18ರಂದು ಅಪರಾಹ್ನ 12 ಗಂಟೆಗೆ ನೆರುಪು, ಎತ್ತ್ ಪೋರಾಟ, ತಂಗಿನಕಾಯಿಗೆ ಗುಂಡು ಹೊಡೆಯುವದು, ಮಹಾ ಪೂಜಾ ಸೇವೆ ಹಾಗೂ ಸಂಜೆ 6.30 ಗಂಟೆಗೆ ವಾದ್ಯಗೋಷ್ಠಿಯೊಂದಿಗೆ ಉತ್ಸವ ಮೂರ್ತಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆ, ತಾ.19ರಂದು ದೇವರ ಜಳಕ, ತಾ.20ರಂದು ಮಹಾಪೂಜಾ ಸೇವೆಯೊಂದಿಗೆ ಕೊಡಿಮರ ಇಳಿಸುವದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ. ಉತ್ಸವದ ಎಲ್ಲ ದಿನಗಳಲ್ಲೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ಆಡಳಿತ ಮಂಡಳಿಯ ಇತರ ಸದಸ್ಯರುಗಳು ಉಪಸ್ಥಿತರಿದ್ದರು.