ಮಡಿಕೇರಿ, ಮಾ.14 : ಕೊಡಗು ಜಿಲ್ಲೆಯ ಗ್ರಾ.ಪಂ ಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸಕಾಲದಲ್ಲಿ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ, ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಳಿಕ ಹೋರಾಟಕ್ಕೆ ಕರೆ ನೀಡುವದಾಗಿ ಎಚ್ಚರಿಕೆ ನೀಡಿದೆ.
ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಅವರು, ಸ್ವಚ್ಛ ಭಾರತ್ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋಟ್ಯಂತರ ರೂ.ಗಳನ್ನು ಜಾಹೀರಾತು ಮತ್ತಿತರ ಕಾರ್ಯಗಳಿಗೆ ದುಂದುವೆಚ್ಚ ಮಾಡುತ್ತಿವೆ. ಆದರೆ ನೈಜವಾಗಿ ಗ್ರಾಮ ಹಾಗೂ ಪಟ್ಟಣಗಳನ್ನು ಸ್ವಚ್ಛವಾಗಿಡುವ ಸ್ವಚ್ಛತಾ ಸಿಬ್ಬಂದಿಗಳಿಗೆ ಕನಿಷ್ಟ ವೇತನ ಮತ್ತು ಮೂಲಭೂತ ಸೌಕರ್ಯಗಳನ್ನೂ ನೀಡುತ್ತಿಲ್ಲವೆಂದು ಆರೋಪ ಮಾಡಿದರು.
ಗ್ರಾ.ಪಂ ಸ್ವಚ್ಛತಾ ಸಿಬ್ಬಂದಿಗಳಿಗೆ ಸರಕಾರ ಮಾಸಿಕ 14 ಸಾವಿರ ರೂ.ಗಳ ಕನಿಷ್ಟ ವೇತನ ನಿಗದಿಪಡಿಸಿದ್ದರೂ, ಬಹುತೇಕ ಪಂಚಾಯಿತಿಗಳಲ್ಲಿ ಕೇವಲ 10-11 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಅವರುಗಳಿಗೆ ಕನಿಷ್ಟ ವೇತನ, ಪಿಂಚಣಿ, ಉಪಧನ (ಗ್ರಾಚ್ಯುಟಿ) ಸೇರಿದಂತೆ ಯಾವದನ್ನೂ ಸಮರ್ಪಕವಾಗಿ ನೀಡದೆ ವಂಚಿಸಲಾಗುತ್ತಿದೆ. ಸುಮಾರು 60 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಂದರ್ಭ ಅವರು ಮುಪ್ಪಿನ ಜೀವನವನ್ನು ನಡೆಸಲು ಸರಕಾರದ ಯಾವದೇ ನಿಯಮಬದ್ಧವಾದ ಆರ್ಥಿಕ ಸಹಾಯ ದೊರೆಯದೆ ಸ್ವಚ್ಛತಾ ಸಿಬ್ಬಂದಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಚ್ಛತಾ ಸಿಬ್ಬಂದಿಗಳಿಗೆ ಸರಕಾರ ನಿಗದಿಪಡಿಸಿದ ಕನಿಷ್ಟ ವೇತನ, ಪಿಂಚಣಿ ಬಾಕಿ ವೇತನವನ್ನು ಕೂಡಲೇ ನೀಡಬೇಕು. ನಿವೃತ್ತಿ ಹೊಂದಿದವರಿಗೆ ಉಪಧನವನ್ನು ಸರಕಾರದ ಈಗಿನ ಆದೇಶದ ಪ್ರಕಾರವೇ ದಿನಾಂಕ ನಿಗದಿಪಡಿಸಿ ನೀಡಬೇಕು. ಸ್ವಚ್ಛತಾ ಸಿಬ್ಬಂದಿಗಳಿಗೆ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ, ಔಷಧಿ, ಪೌಷ್ಟಿಕಾಂಶ ಆಹಾರಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಪಂಚಾಯಿತಿಯಿಂದ ಒದಗಿಸಬೇಕು. ಸ್ವಚ್ಛತಾ ಸಿಬ್ಬಂದಿಗಳಿಗೆ ಅವರು ವಾಸಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು. ವರ್ಷಕ್ಕೆ ಎರಡು ಜೊತೆ ಸಮವಸ್ತ್ರ, ಬೂಟು, ಗ್ಲೌಸ್, ಜರ್ಕಿನ್ ಮುಂತಾದವುಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಹಲವಾರು ವರ್ಷಗಳಿಂದ ದುಡಿಯುತ್ತಿದ್ದರೂ, ಖಾಯಂಗೊಳ್ಳದ ನೌಕರರನ್ನು ಕೂಡಲೇ ಖಾಯಂಗೊಳಿಸಿ ಪಂಚತಂತ್ರದಲ್ಲಿ ಅಳವಡಿಸುವದರೊಂದಿಗೆ ಅವರಿಗೆ ಇಪಿಎಫ್ ಮೂಲಕವೇ ವೇತನ ನೀಡಬೇಕು ಎಂದು ಭರತ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಾದ ಹೆಚ್.ಆರ್.ಮಂಜು ಹಾಗೂ ವೀರಭದ್ರ ಉಪಸ್ಥಿತರಿದ್ದರು.